ವಿಜಯಪುರ : ದೇಶದ ರಕ್ಷಣಾ ಸಾಮರ್ಥ್ಯದ ಬಲಿಷ್ಠ ಬತ್ತಳಿಕೆ ಸೇರುತ್ತಿರುವ ರಫೆಲ್ ಯುದ್ಧ ವಿಮಾನದ ಮೊದಲ ಪೈಲಟ್ ತಂಡದಲ್ಲಿ ವಿಜಯಪುರ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿ ಸ್ಥಾನ ಗಿಟ್ಡಿಸಿದ್ದಾನೆ. ಹೀಗಾಗಿ ಇಲ್ಲಿನ ಸೈನಿಕ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿದೆ.
1994 – 2001 ರ ವರೆಗೆ 7 ವರ್ಷ ವಿಜಯಪುರ ಸೈನಿಕ ಶಾಲೆಯಲ್ಲಿ ಓದಿದ್ದ ಅರುಣಕುಮಾರ ಎಂಬ ಪ್ರತಿಭಾವಂತ ವಿದ್ಯಾರ್ಥಿ. ಈ ಸಮರ ಸೇನಾನಿಗೆ ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ನಿರ್ಮಿತ ರಫೆಲ್ ಯುದ್ಧ ವಿಮಾನ ಮುನ್ನಡೆಸುವ ಅವಕಾಶ ದೊರಕಿದೆ.
ಇದೇ ಮೊದಲ ಬಾರಿಗೆ ಭಾರತದ ರಕ್ಷಣಾ ಪಡೆಯ ವಾಯು ಸೇನಾ ಬಲಕ್ಕೆ ಫ್ರಾನ್ಸ್ ನಿರ್ಮಿತ ಐದು ರಫೆಲ್ ವಿಮಾನಗಳು ಸೇರ್ಪಡೆ ಆಗುತ್ತಿದೆ.
ಬುಧವಾರ ಭಾರತದ ಹರಿಯಾಣದ ಅಂಬಾಲಾ ಏರಬೇಸ್ ಗೆ ಬಂದಿಳಿದ ರಫೆಲ್ ವಿಮಾನ ನಡೆಸುವ ಅವಕಾಶ ಅರುಣಕುಮಾರಗೆ ದೊರಕಿದೆ. ಹೀಗಾಗಿ ಸದರಿ ಅರುಣಕುಮಾರ ಓದಿದ ವಿಜಯಪುರ ಸೈನಿಕ ಶಾಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಬಿಹಾರ ರಾಜ್ಯದ ರೋಹ್ಟಕ್ ಮೂಲದ ಅರುಣಕುಮಾರ ತಂದೆ ನಾಗೇಂದ್ರಪ್ರಸಾದ ಬೆಂಗಳೂರಿನಲ್ಲಿ ಜ್ಯೂನಿಯರ್ ಏರ್ ವಾರಂಟ್ ಆಫಿಸರ್ ಆಗಿದ್ದರು. ಈ ಹಂತದಲ್ಲಿ 1994 ರಲ್ಲಿ ಬೆಂಗಳೂರು ಕೇಂದ್ರೀಯ ವಿದ್ಯಾಲಯದಲ್ಲಿ 5ನೇ ತರಗತಿ ಪಾಸಾಗಿ, ಅದೇ ವರ್ಷ ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಪ್ರವೇಶ ಪಡೆದಿದ್ದರು. 2001 ರಲ್ಲಿ ಪಿಯುಸಿ ದ್ವಿತೀಯ ವಿಜ್ಞಾನ ಪರೀಕ್ಷೆ ಉತ್ತೀರ್ಣನಾಗಿ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್.ಡಿ.ಎ.) ಗೆ ಆಯ್ಕೆಯಾಗಿ, ವಾಯುಸೇನೆಗೆ ಸೇರ್ಪಡೆ ಆಗಿದ್ದ.
ಸತತ ಪರಿಶ್ರಮಿ ಆಗಿದ್ದ ಅರುಣಕುಮಾರ ಛಲಗಾರ ಮಾತ್ರವಲ್ಲ, ಪ್ರಬಲ ನಾಯಕತ್ವ ಗುಣ ಹೊಂದಿದ್ದ. ಶಿಕ್ಷಣ ಮಾತ್ರವಲ್ಲ, ಕ್ರೀಡೆ, ನಾಟಕ ಸೇರಿದಂತೆ ಸಾಂಸ್ಕೃತಿಕ ರಂಗದಲ್ಲಿ ಮುಂಚೂಣಿಯಲ್ಲಿದ್ದ. ಹೀಗಾಗಿ ಆತನಲ್ಲಿದ್ದ ಬಹುಮುಖ ಪ್ರತಿಭೆಯನ್ನು ಕಂಡು ನಮ್ಮ ಸೈನಿಕ ಶಾಲೆಯ ವಿಜಯನಗರ ಹೌಸ್ ಕ್ಯಾಪ್ಟನ್ ಮಾಡಲಾಗಿತ್ತು. ಇದೀಗ ನವ ಪೀಳಿಗೆಗೆ ಮಾದರಿ ಆಗಿದ್ದಾರೆ ಎಂದು ಸೈನಿಕ ಶಾಲೆಯ ಅವರ ಶಿಕ್ಷಕರಾಗಿದ್ದ ರಾಮಮೂರ್ತಿ ಗೋಲಪಲ್ಲಿ ಸಂತಸ ವ್ಯಕ್ತಪಡಿಸುತ್ತಾರೆ.
ರಫೆಲ್ ಯುದ್ಧ ವಿಮಾನ ಮುನ್ನಡೆಸುವ ಐವರ ತಂಡದಲ್ಲಿ ಸ್ಥಾನ ಪಡೆದಿರುವ ಅರುಣಕುಮಾರ ನಮ್ಮ ಶಾಲೆಯ ವಿದ್ಯಾರ್ಥಿ ಎಂಬುದು ನಮಗೆ ಹೆಮ್ಮೆ.
ಸೈನಿಕ ಶಾಲೆಯ ಭವಿಷ್ಯದ ಪೀಳಿಗೆಗೆ ವಾಯುಸೇನೆಯ ವಿಂಗ್ ಕಮಾಂಡರ್ ಅರುಣಕುಮಾರ ಸ್ಫೂರ್ತಿ ಆಗಿದ್ದಾರೆ ಎಂದು ಸೈನಿಕ ಶಾಲೆಯ ಪ್ರಾಚಾರ್ಯ ಭಾರತೀಯ ನೇವಿ ಕ್ಯಾಪ್ಟನ್ ವಿನಯ ತಿವಾರಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.