ವಿಜಯಪುರ: ಮಾ.24ರಿಂದ ಐದು ದಿನಗಳ ಕಾಲ ಕತಕನಹಳ್ಳಿ ಗ್ರಾಮದಲ್ಲಿ ನಡೆಯಬೇಕಿದ್ದ ಗುರು ಚಕ್ರವರ್ತಿ ಸದಾಶಿವ ಮುತ್ಯಾನ ಜಾತ್ರೆಯನ್ನು ಕೊರೊನಾ ರೋಗ ನಿಯಂತ್ರಣ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಜಾತ್ರೆಗೆ ದೇಶ-ವಿದೇಶದಿಂದ ಲಕ್ಷಾಂತರ ಜನರು ಆಗಮಿಸುವ ಕಾರಣ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಾತ್ರೆ ರದ್ದು ಮಾಡಲಾಗಿದ್ದು, ಭಕ್ತರು ಸಹಕರಿಸಬೇಕೆಂದು ಮಠದ ಶಿವಯ್ಯ ಶ್ರೀಗಳು ಕೋರಿದರು.
ಶನಿವಾರ ಕತಕನಹಳ್ಳಿಯ ಶ್ರೀಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶ ಪಾಲಿಸುವುದು ಸದಾಶಿವ ಮುತ್ಯಾನ ಭಕ್ತರ ಆದ್ಯ ಕರ್ತವ್ಯ. ಜನಹಿತಕ್ಕಿಂತ ಮತ್ತೇನೂ ದೊಡ್ಡದಲ್ಲ. ಹೀಗಾಗಿ ಅದ್ಧೂರಿ ಜಾತ್ರೆಯನ್ನು ರದ್ದು ಮಾಡಲಾಗಿದ್ದು, ಭಕ್ತರು ಜಾತ್ರೆಗೆ ಬರದೇ ಮನೆಯಲ್ಲೇ ಇದ್ದು ಭಕ್ತಿ ಸಮರ್ಪಿಸಬೇಕೆಂದು ಹೇಳಿದರು.
ಸರ್ಕಾರದ ಆದೇಶದಂತೆ ಶ್ರೀ ಮಠದಲ್ಲಿ ಶುಕ್ರವಾರ ಸೇರಿದ್ದ ಭಕ್ತರ ಸಭೆಯಲ್ಲಿ ಜಾತ್ರೆ ರದ್ದು ಮಾಡುವ ತೀರ್ಮಾನ ಕೈಗೊಳ್ಳಲಾಗಿದ್ದು,ಬೆರಳೆಣಿಕೆ ಜನರು ಸೇರಿ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಭಕ್ತರು ಸರ್ಕಾರದ ಆದೇಶ ಮೀರಿ ಜಾತ್ರೆಗೆ ಆಗಮಿಸದಂತೆ ಶ್ರೀಗಳು ಕೋರಿದರು.
ಜಾತ್ರೆಯಲ್ಲಿ ಸಾಮೂಹಿಕ ವಿವಾಹ ಸೇರಿದಂತೆ ಐದು ದಿನಗಳ ಜಾತ್ರೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. 42 ಜೋಡಿ ಮದುವೆಯಾಗಲು ಹೆಸರು ನೋಂದಣಿ ಮಾಡಿಸಿದ್ದವು. ಆದರೆ ಜಾತ್ರೆ ರದ್ದು ಮಾಡಿರುವ ಕಾರಣ ಸದರಿ ವಿವಾಹ ನೋಂದಣಿ ಮಾಡಿಸಿದ ಜೋಡಿಗೆ ಮಾಂಗಲ್ಯ ಹಾಗೂ ಇತರೆ ವಸ್ತುಗಳನ್ನು ನೇರವಾಗಿ ಸಲ್ಲಿಸಲಾಗುತ್ತದೆ. ವಧು-ವರರು ತಮ್ಮ ತಮ್ಮ ಗ್ರಾಮದ ದೇವಸ್ಥಾನಗಳಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹ ಮಾಡಿಕೊಳ್ಳಲು ಕೋರಲಾಗಿದೆ ಎಂದರು.
ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಭಾರ ಎತ್ತುವ ಸ್ಪರ್ಧೆ, ಕುಸ್ತಿ, ಸಂಗೀತ, ಹಾಸ್ಯ ಕಾರ್ಯಕ್ರಮ ಸೇರಿದಂತೆ ಒಟ್ಟು 16 ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದರು. ಮೇಲ್ಮನೆ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಜಯ ಜೋಶಿ ಇದ್ದರು.