ವಿಜಯಪುರ: ದೇಶದಲ್ಲಿ ಕಾಂಗ್ರೆಸ್ ಯಾವಾಗಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರೋಧಿಯಾಗಿದೆ. ಈಗ ರಾಹುಲ್ ಗಾಂಧಿ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳುವ ಮೂಲಕ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮೀಸಲು ರದ್ದು ಮಾಡುತ್ತೇವೆ ಎಂದು ಹೇಳಲು ಮೀಸಲಾತಿ ಕಾಂಗ್ರೆಸ್ ಕೊಟ್ಟಿರುವ ಭಿಕ್ಷಾ ಪಾತ್ರೆಯಲ್ಲ. ಮೀಸಲಾತಿ ದಲಿತರ ಜನ್ಮ ಸಿದ್ಧ ಹಕ್ಕು ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕದಲ್ಲಿ ಮೀಸಲಾತಿ ರದ್ದು ಪಡಿಸುವ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಕೊಟ್ಟಿದ್ದಾರೆ. ಆಮೇಲೆ ನಾನು ಆ ಹೇಳಿಕೆ ಕೊಟ್ಟಿಲ್ಲ ಎಂದು ರಾಹುಲ್ ಹೇಳುತ್ತಾನೆ. ದಲಿತರ ಕುರಿತು ಕಾಂಗ್ರೆಸ್ ಕೇವಲ ಮೊಸಳೆ ಕಣ್ಣೀರು ಹಾಕುತ್ತದೆ. ಸಂಸತ್ತಿನಲ್ಲಿ ಸಂವಿಧಾನ ಹಿಡಿದು ರಾಹುಲ್ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೆಲ್ಲ ಸುಮ್ಮನೆ ಅವರ ತೋರಿಕೆ ಮಾತ್ರ. ದಲಿತರ 25 ಸಾವಿರ ಕೋಟಿ ಹಣವನ್ನು ಬೇರೆ ಯೋಜನೆಗಳಿಗೆ ರಾಜ್ಯ ಸರ್ಕಾರ ಹಂಚಿಕೆ ಮಾಡಿದೆ ಎಂದು ಕಿಡಿಕಾರಿದರು.
ಅಲ್ಲದೇ, ದೇಶದ ವಿಭಜನೆಯ ಶಕ್ತಿಯೊಂದಿಗೆ ರಾಹುಲ್ ಕಾಣಿಸಿಕೊಂಡಿದ್ದಾರೆ. ದೇಶದ ಭದ್ರತೆಗೆ ಯಾವಾಗಲೂ ರಾಹುಲ್ ಬೆದರಿಕೆ ಒಡ್ಡಿಡುತ್ತಿದ್ದಾರೆ ಎಂದು ಆರೋಪಿಸಿದರು.
ಮಂಡ್ಯದಲ್ಲಿ ಗಣೇಶ ವಿಸರ್ಜನೆ ಗಲಾಟೆ ವಿಚಾರ ಪ್ರತಿಕ್ರಿಯಿಸಿ, ಈ ಗಲಾಟೆಗೆ ಪ್ರಚೋದನೆಯೇ ಕಾರಣ. ಈ ರೀತಿ ಪ್ರಚೋದನೆಯಿಂದ ದೇಶ, ಇತರ ರಾಜ್ಯದಲ್ಲಿ ಆಗುತ್ತದೆ ಎಂದರು.
ರಾಜ್ಯದಲ್ಲಿ ದಲಿತ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿದ ಜಿಗಜಿಣಗಿ, ಸಿಎಂ ಆಗದಿರಲು ದಲಿತರು ಅಯೋಗ್ಯರಾ? ಸಿಎಂ ಬದಲಾವಣೆ ಮಾಡಿದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಲ್ಲಿಗೆ ತಂದು ಮುಖ್ಯಮಂತ್ರಿ ಮಾಡಲಿ ಎಂದು ಹೇಳಿದರು.