ವಿಜಯಪುರ: ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ನಿರಂತರ ಮಳೆ ಇಲ್ಲದೇ ಶಾಶ್ವತ ಬರದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಇದೀಗ ಅಭಿವೃದ್ಧಿ ಶಕೆ ಆರಂಭವಾಗಿದೆ. ಡಾ| ಬಿ.ಆರ್. ಅಂಬೇಡ್ಕರ ನೇತೃತ್ವದ ಸಮಿತಿ ರಚಿಸಿದ ಸಂವಿಧಾನದಲ್ಲಿ ಜಾರಿ ಬಂದಿರುವ ಕಾರಣ ದೇಶದ ನಾಗರಿಕರು, ನ್ಯಾಯ, ಸ್ವಾತಂತ್ರ್ಯ , ಸಮಾನತೆ, ಲಿಂಗ ಮತ್ತು ಆರ್ಥಿಕ ಸಮಾನತೆ ಭದ್ರಪಡಿಸಿಕೊಳ್ಳಲು ಅವಕಾಶ ಪಡೆಯಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ನಗರದ ಅಂಬೇಡ್ಕರ್ ಕ್ರೀಡಾಂಗಣ ದಲ್ಲಿ 71ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರೆವೇರಿಸಿ ವಿವಿಧ ಕವಾಯತ್ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ಹಾಗೂ ಜವಾಬ್ದಾರಿವನ್ನು ನೀಡಿದೆ. ನನಗೆ ದೇಶ ಏನು ಮಾಡಿದೆ ಎಂದು ಕೇಳಿಕೊಳ್ಳುವ ಮುನ್ನ, ನಾನು ದೇಶಕ್ಕಾಗಿ ಏನು ಮಾಡುತ್ತಿದ್ದೇನೆ ಎಂಬುವುದನ್ನು ಪ್ರತಿಯೊಬ್ಬರೂ ಪ್ರಶ್ನಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ, ಸಾಮಾಜಿಕ, ಭಾಷೆ ಹಾಗೂ ಧಾರ್ಮಿಕತೆ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ವಿಶ್ವದ ಬಹುದೊಡ್ಡ ಶಕ್ತಿ ರಾಷ್ಟ್ರ ಎನಿಸಿರುವ ಭಾರತದ ಲಿಖೀತವಾದ ಪ್ರಜಾಪ್ರಭುತ್ವವಾಗಿ ಸಂವಿಧಾನ ಜಾಗತ್ತಿಗೆ ಮಾದರಿಯಾಗಿದೆ. ಮಹಾತ್ಮ ಗಾಂಧೀಜಿ, ನೇತಾಜಿ, ನೆಹರು, ಡಾ| ಬಿ.ಆರ್. ಅಂಬೇಡ್ಕರ್ ಅವರಂಥ ಮಹಾತ್ಮರಿಂದ ದಕ್ಕಿರುವ ಈ ಸ್ವಾತಂತ್ರ್ಯ ಹಾಗೂ ಸಂವಿಧಾನ ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದರು.
ಸರ್ಕಾರ ಮತ್ತು ಜನರ ಸಹಭಾಗಿತ್ವವು ಉತ್ತಮ ರಾಷ್ಟ್ರವನ್ನು ನಿರ್ಮಿಸಿದರೆ ರಾಷ್ಟ್ರಗಳ ಸಹಭಾಗಿತ್ವವು ಉತ್ತಮ ಜಗತ್ತನ್ನು ನಿರ್ಮಿಸುತ್ತದೆ. ಈ ರೀತಿಯಾಗಿ ಕುಟುಂಬ ರಾಷ್ಟ್ರ ಮತ್ತು ಪ್ರಪಂಚವನ್ನು ಹಣೆಯುವದು ಮತ್ತು ಪ್ರಪಂಚವನ್ನು ಕುಟುಂಬವಾಗಿ ಪರಿಗಣಿಸಲು ಪ್ರಮುಖ ಕಾರಣವಾಗಿದೆ. ಮುಕ್ತ ಸಂವಹನ, ಪ್ರಾಮಾಣಿಕ ಸಂಭಾಷಣೆ ಸಹಾನುಭೂತಿಯಿಂದ ಪಾಲುದಾರಿಕೆ ಹೆಚ್ಚಿಸಲಾಗುತ್ತದೆ. ಜನರ ಕಲ್ಯಾಣಕ್ಕಾಗಿ ಕರ್ತವ್ಯವನ್ನು ಪಾಲಿಸುವ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಸಮಾಜ ಹೆಚ್ಚಿನ ಗೌರವ ತೋರಿಸುತ್ತ ಬಂದಿದೆ.
ಇಂಥ ಸಂದರ್ಭದಲ್ಲಿ ಬರ ಪೀಡಿತ ವಿಜಯಪುರ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಂದಾಗಿ ಜಿಲ್ಲೆಯಲ್ಲಿ ನೀರಾವರಿ ಕ್ಷೇತ್ರ ವಿಸ್ತಾರಗೋಳ್ಳುತ್ತಿದೆ. ಕೃಷಿಕರ ಬದುಕು ಹಾಗೂ ಜಿಲ್ಲೆಯ ಜನರ ಆರ್ಥಿಕ ಮಟ್ಟ ಸುಧಾರಿಸುತ್ತಿದೆ. ಇದರಿಂದ ಬರದ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ಮುಂಬೈ, ಮಂಗಳೂರು, ಗೋವಾ ಬೆಂಗಳೂರು ಸೇರಿದಂತೆ ವಿವಿಧೆಡೆ ಜನರು ಗುಳೆ ಹೋಗುವುದು ತಪ್ಪುತ್ತಿದೆ. ನಗರೀಕರಣದತ್ತ ಮುಖ ಮಾಡುವ ಬದಲು ಜಿಲ್ಲೆಯ ಜನರು ಇದೀಗ ಸ್ವಾವಲಂಬಿ ಜೀವನ ನಡೆಸಲು ನೀರಾವರಿ ಸಹಕಾರಿ ಆಗಿದೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಹಲವು ಕಾರಣಗಳಿಂದ ಉದ್ಯೋಗ ಅವಕಾಶಗಳ ಕೊರತೆಯ ಕಾರಣದಿಂದ ಹತಾಶ, ಅತೃಪ್ತಿ, ಕೋಪ, ಆತಂಕ, ಒತ್ತಡ ಮತ್ತು ನಡವಳಿಕೆಯಲ್ಲಿನ ವೈಪರಿತ್ಯಗಳಲ್ಲಿ ವ್ಯಕ್ತವಾಗುತ್ತಿದೆ. ಯುವ ಜನತೆ ಲಾಭದಾಯಕ ಉದ್ಯೋಗ, ಸಮುದಾಯದೊಂದಿಗೆ ಸಕ್ರೀಯವಾಗಿ ತೊಡಗಿಸಿಕೊಂಡು ಪೋಷಕರ ಮಾರ್ಗದರ್ಶನದಲ್ಲಿ ಜೀವನ ನಡೆಸಬೇಕಿದೆ ಎಂದು ಯುವ ಸಮೂಹಕ್ಕೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ 2011ರಲ್ಲಿ ಪ್ರತಿ ಸಾವಿರ ಪುರುಷರಿಗೆ 931 ಮಹಿಳೆಯರು ಇದ್ದು, ಲಿಂಗ ಸಮಾನತೆಯನ್ನು ದೇಶದಲ್ಲಿ ಸಾಧಿಸುವ ದೃಷ್ಟಿಯಿಂದ ಮೊದಲ ಬಾರಿಗೆ 2015ರಲ್ಲಿ ದೇಶದ 100 ಜಿಲ್ಲೆಗಳಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಅನುಷ್ಠಾನಗೊಂಡಿದೆ ಎಂದರು.
ಸಮಾರಂಭದಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ನೆರೆದ ಎಲ್ಲರೂ ಭಾರತ ಸಂವಿಧಾನದ ಪೀಠಿಕೆ ಓದಿ ಸಂವಿಧಾನಕ್ಕೆ ಗೌರವ ಸೂಚಿಸಿದರು. ಕ್ರೀಡಾಂಗಣದಲ್ಲಿ ವಿವಿಧ ಕವಾಯತು ತಂಡಗಳು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ. ಪಾಟೀಲ, ಜಿಪಂ
ಅಧ್ಯಕ್ಷ ಶಿವಲಿಂಗಪ್ಪ ನೇದಲಗಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಪ್ರಕಾಶ ನಿಕ್ಕಂ, ಅಪರ ಜಿಲ್ಲಾಧಿಕಾರಿ ಔದ್ರಾಮ, ಎಎಸ್ಪಿ ರಾಮ ಅರಸಿದ್ದಿ, ವೂಡಾ ಅಧ್ಯಕ್ಷ ಶ್ರೀಹರಿ ಗೋಳಸಂಗಿ ಇದ್ದರು.