ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಅಲ್ಲಲ್ಲಿ ತುಂತುರು ಮಳೆ ಸಂದರ್ಭದಲ್ಲಿ ಬಿದ್ದ ಡಿಸಿಲಿಗೆ ಮತ್ತೊಬ್ಬ ಬಲಿಯಾಗಿದ್ದಾನೆ. ಇದರೊಂದಿಗೆ ಪ್ರಸಕ್ತ ವರ್ಷದ ಬೇಸಿಗೆ ಮಳೆಯಲ್ಲಿ ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರನ್ನು ಸಿಡಿಲು ಬಲಿ ಪಡೆಯುವ ಮೂಲಕ ಮಳೆ ಆರಂಭಗೊಂಡಿದೆ.
ಇಂಡಿ ತಾಲೂಕಿನ ಮಸಳಿ ಬಿಕೆ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ 45 ವರ್ಷದ ಸೋಮಶೇಖರ ಕಾಶೀನಾಥ ಪಟ್ಟಣಶೆಟ್ಟಿ ಎಂಬವರು ಮೃತಪಟ್ಟಿದ್ದಾರೆ. ಗುರುವಾರ ಸಂಜೆ 5-30 ರ ಸುಮಾರಿಗೆ ಸೋಮಶೇಖರ ಜಮೀನಿನಲ್ಲಿ ಕೆಲಸದಲ್ಲಿ ತೊಡಗಿದ್ದಾಗ, ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಂಡಿ ಪಟ್ಟಣದಲ್ಲಿ ಹೊರ ವಲಯದಲ್ಲಿ ಸಿಡಿಲು ಬಡಿದು ಕುರಿಗಾಯಿ ಬಾಲಕ 15 ವರ್ಷದ ಭೀರಪ್ಪ ನಿಂಗಪ್ಪ ಅವರಾದಿ ಸ್ಥಳದಲ್ಲೇ ಮೃತಪಟ್ಟ ವರದಿ ಬೆನ್ನಲ್ಲೇ ಸೋಮಶೇಖರ ಬಲಿಯಾದ ವರದಿ ಬಂದಿದೆ.
ಇದಲ್ಲದೇ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಬಿರುಗಾಳಿ ಸಹಿತ ಗುರುವಾರ ಸಂಜೆ ತುಂತುರು ಮಳೆ ಸುರಿದಿದ್ದು, ಕೆಂಡದಂತೆ ಕಾದಿರುವ ಭೂಮಿಗೆ ತಂಪೆರೆದಿದೆ. ಬಿರಿಗಾಳಿಗೆ ಅಲ್ಲಲ್ಲಿ ಗಿಡ-ಮರಗಳು ನೆಲಕ್ಕೆ ಉರುಳಿವೆ.
ಇಂಡಿ, ಬಬಲೇಶ್ವರ, ಚಡಚಣ, ದೇವರಹಿಪ್ಪರಗಿ, ಬಸವನಬಾಗೇವಾಡಿ, ತಿಕೋಟಾ ಸೇರಿದಂತೆ ವಿವಿಧ ತಾಲೂಕಗಳಲ್ಲಿ ಬಿರುಗಾಳಿ ಸಹಿತ ತುಂತುರು ಮಳೆಯಾಗಿದೆ. ತಿಕೋಟಾ ತಾಲೂಕಿನ ಘೋಣಸಗಿ, ಬಾಬಾನಗರ, ಹುಬನೂರ, ಸೋಮದೇವರಹಟ್ಟಿ, ಬಿಜ್ಜರಗಿ, ಕಳ್ಳಕವಟಗಿ ಸುತ್ತ ಮುತ್ತ ಗ್ರಾಮಗಳಲ್ಲಿ ಗಾಳಿ ಸಹಿತ ಜಿಟಿಜಿಟಿ ಮಳೆ ಸುರಿದಿದೆ.