ವಿಜಯಪುರ: ವಿಶೇಷ ಘಟಕ ಗಿರಿಜನ ಉಪ ಯೋಜನೆಯಡಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸುವುದರ ಜೊತೆಗೆ ಅನುದಾನ ಮರಳಿ ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಇಲಾಖಾವಾರು 2020ರ ಫೆಬ್ರವರಿ ಅಂತ್ಯದ ವರೆಗೆ ಸಾಧಿಸಿದ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಸದರಿ ಯೋಜನೆಯಲ್ಲಿ ಕೃಷಿ ಇಲಾಖೆ ವ್ಯಾಪ್ತಿಯ ಕೃಷಿ ಭಾಗ್ಯ ಯೋಜನೆ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸಬೇಕು. ಅನುದಾನ ಮರಳಿ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅದರಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿಯೂ ಸಹ ಸೂಕ್ತ ಪ್ರಗತಿ ಸಾಧಿಸುವಂತೆ ಅವರು ಸೂಚನೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸಿಂದಗಿ, ಆಲಮೇಲ, ನಾಲತವಾಡ, ಮನಗೂಳಿ, ಬ.ಬಾಗೇವಾಡಿಗಳಲ್ಲಿ ನಿಗದಿತ ಗುರಿಗೆ ಪ್ರಗತಿ ಸಾಧಿಸದೆ ಇರುವುದರಿಂದ ಕಾರಣ ಕೇಳಿ, ನೋಟಿಸ್ ಜಾರಿಗೊಳಿಸಬೇಕು. ಅದರಂತೆ ಸಭೆಗೆ ಗೈರು ಹಾಜರಾಗಿರುವವರಿಗೂ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂಥವರ ಬಗ್ಗೆ ತೀವ್ರ ನಿಗಾ ಇಡುವುದರ ಜೊತೆಗೆ ಅವಶ್ಯಕ ಕ್ರಮ ಕೈಗೊಳ್ಳಬೇಕು. ಮೀನುಗಾರಿಕೆ ಚಟುವಟಿಕೆ ಉತ್ತೇಜನ, ವಿವಿಧ ಕೆರೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಬೇಕು. ಶೇ.100ರಷ್ಟು ಪ್ರಗತಿ ಸಾಧಿ ಸದೆ ಇರುವ ಇಲಾಖೆಗಳ ಅಧಿಕಾರಿಗಳು ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಮತ್ತು ಅನುದಾನವನ್ನು ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಸಮಾಜ ಕಲ್ಯಾಣ ಉಪನಿರ್ದೇಶಕ ಮಹೇಶ ಪೋದ್ದಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.