ವಿಜಯಪುರ: ಖಾಸಗಿ ವಲಯದಲ್ಲಿ ಪರಿಶಿಷ್ಟ ಸಮುದಾಯದ ಆರ್ಹರಿಗೆ ಉದ್ಯೋಗಾವಕಾಶ ಕಲ್ಪಿಸುವುದಕ್ಕಾಗಿ ಸರ್ಕಾರ ಆಶಾದೀಪ ಎಂಬ ನೂತನ ಯೋಜನೆ ಜಾರಿಗೊಳಿಸಿದೆ. ಹೀಗಾಗಿ ಖಾಸಗಿ ವಲಯಗಳಲ್ಲಿ ಈಗಾಗಲೇ ನೇಮಕ ಮಾಡಿಕೊಂಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಮಾ. 20ರೊಳಗೆ ಜಿಲ್ಲಾ ಕಾರ್ಮಿಕ ಇಲಾಖೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಆಶಾದೀಪ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಆಯಾ ಖಾಸಗಿ ವಲಯಗಳಲ್ಲಿ ಕಳೆದ 2019 ಏಪ್ರಿಲ್ 1ರಿಂದ ಈವರೆಗೆ ನೇಮಕ ಮಾಡಿಕೊಂಡಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ಯೋಗಿಗಳ ಮಾಹಿತಿಯನ್ನು ಮಾ. 20ರೊಳಗೆ ಸಲ್ಲಿಸಬೇಕು. ಅಪ್ರಂಟಿಸ್‌ಶಿಪ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕಾಯಂ ಹುದ್ದೆಗಳಲ್ಲಿ ನೇಮಕಾತಿ ಮಾಡಿಕೊಂಡಲ್ಲಿ ಅಂತಹ ನೌಕರರಿಗೆ ಆಯಾ ಹುದ್ದೆಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನದರದಲ್ಲಿ ಶೇ. 50 ಮೊತ್ತವನ್ನು ಉದ್ಯೋಗದಾತರಿಗೆ ಗರಿಷ್ಠ 2 ವರ್ಷಗಳ ಅವಧಿ ಗೆ ಮರುಪಾವತಿ ಮಾಡುವ ಕಾರಣ ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೇಮಕಾತಿಗಾಗಿ ಉತ್ತೇಜಿಸುವುದು, ನೇಮಕಾತಿ ಮಾಡಿಕೊಂಡ ಸಂಸ್ಥೆಗಳಿಗೆ ಅಂತಹ ನೌಕರರ ಇಎಸ್‌ಐ ಹಾಗೂ ಪಿಎಫ್ ವಂತಿಕೆಯನ್ನು ಮರು ಪಾವತಿಸುವ ಮೂಲಕ ಆರ್ಥಿಕ ಸಹಾಯ ನೀಡುವುದು ಹಾಗೂ ತರಬೇತಿ ಪಡೆಯುವ ಅಪ್ರಂಟೈಸ್‌ಗಳಿಗೆ ಶಿಷ್ಯವೇತನ ನೀಡುವಂತಹ ಉದ್ದೇಶ ಈ ಯೋಜನೆಯಡಿ ಹೊಂದಿದ್ದು, ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಮತ್ತು ಖಾಸಗಿ ವಲಯದ ಉದ್ಯೋಗದಾತರು ಈ ಯೋಜನೆ ಸದುಪಯೋಗ ಪಡೆಯುವಂತೆ ನೋಡಿಕೊಳ್ಳಲು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಳ್ಳುವ ಅರ್ಹ ಉದ್ಯೋಗಿಗಳಿಗೆ ಮಾಲೀಕರು, ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಬೇಕಾದ ಶಾಸನಬದ್ಧ ಭವಿಷ್ಯನಿಧಿ ಹಾಗೂ ಇಎಸ್‌ಐ ವಂತಿಕೆಯನ್ನು ಆಯಾ ಉದ್ಯೋಗದಾತರಿಗೆ ಎರಡು ವರ್ಷಗಳ ಅವಧಿಗೆ ಸರ್ಕಾರ ಮರುಪಾವತಿ ಮಾಡಲಿದೆ. ಅದರಂತೆ ಒಂದು ವರ್ಷದ ಅವಧಿಯ ಸಾಮಾನ್ಯ ಮತ್ತು ಎರಡು ವರ್ಷಗಳ ಅವಧಿಯ ಸಮಗ್ರ ಅಪ್ರಂಟೈಸ್ ತರಬೇತಿ ಪಡೆಯುತ್ತಿರುವ ಪಜಾ,ಪಪಂ ಅಭ್ಯರ್ಥಿಗಳಿಗೆ ಪಾವತಿಸಬೇಕಾದ ಮಾಸಿಕ ಶಿಷ್ಯವೇತನ ಮೊತ್ತದಲ್ಲಿ ಶೇ. 50 ಗರಿಷ್ಠ ಮಾಸಿಕ 3,000 ರೂ.ಗಳನ್ನು ಸಹ ಮರುಪಾವತಿ ಮಾಡಲಾಗುತ್ತಿದ್ದು, ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಕುರಿತು ಅರಿವು ಮೂಡಿಸುವ ಜೊತೆಗೆ ಅರ್ಹರಿಗೆ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಕಾರ್ಮಿಕ ಇಲಾಖೆ ಕಾರ್ಮಿಕ ಅಧಿಕಾರಿ-1 ಸೂರ್ಯಪ್ಪ ಡೊಂಬರಮತ್ತೂರ, ಕಾರ್ಮಿಕ ಅಧಿ ಕಾರಿ-2 ಸಿದ್ದಪ್ಪ ಖೈನೂರ, ಕಾರ್ಮಿಕ ನಿರೀಕ್ಷಕ ಜಗದೇವ ಸಜ್ಜನ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ ಸೇರಿದಂತೆ ಇತರರು ಇದ್ದರು.