ವಿಜಯಪುರ: ಚುನಾವಣೆ ಕರ್ತವ್ಯದಲ್ಲಿ ಅಂಚೆ ಮತದಾನದ ವೇಳೆ ಬಿಜೆಪಿ ಅಭ್ಯರ್ಥಿ ಪುತ್ರಿಯ ಸಮ್ಮುಖದಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಿದ್ದಕ್ಕಾಗಿ ಮೂವರು ಅಧಿಕಾರಿಗಳಿಗೆ ಬಬಲೇಶ್ವರ ಚುನಾವಣಾ ಅಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಚುನಾವಣಾ ಪೋಲಿಂಗ್ ಏಜೆಂಟ್ ದಾವಲ್ ಮಲೀಕ್ ಹಳ್ಳಿ ಎಂಬವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಬಬಲೇಶ್ವ ಕ್ಷೇತ್ರದ ತಿಕೋಟಾ ತಾಲೂಕಿನ ಧನ್ನರ್ಗಿ, ಸಿದ್ದಾಪರು ಗ್ರಾಮದಲ್ಲಿ ಕ್ಷೇತ್ರದಲ್ಲಿ 80 ವರ್ಷ ಮೇಲ್ಟಟ್ಟ ಮತದಾನದ ಸಂದರ್ಭದಲ್ಲಿ ಬಬಲೇಶ್ವರ ಕ್ಷೇತ್ರದ ಬಿಜೆಪಿ ವಿಜುಗೌಡ ಪಾಟೀಲ ಅವರ ಪುತ್ರಿ ಸಂಕಲ್ಪ ಬಂದು ಮತದಾರರಿಗೆ ಆಮಿಷ ಒಡ್ಡಿ ಮತದಾನ ಮಾಡಿಸಿದ್ದಾರೆ ಎಂದು ದೂರಿದ್ದಾರೆ.
ಸಂಕಲ್ಪ ವಿಜುಗೌಡ ಪಾಟೀಲ ತಂದೆ ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಆದರೆ ಸಂಕಲ್ಪ ಅವರು ಬಬಲೇಶ್ವರ ಕ್ಷೇತ್ರದ ಮತದಾರರಲ್ಲ, ನಿಯಮಗಳ ಪ್ರಕಾರ ಚುನಾವಣೆ ಎಜೆಂಟರೂ ಅಲ್ಲ. ಆದರೂ 80 ವರ್ಷ ಮೇಲ್ಪಟ್ಟವರ ಮತದಾನದ ಸಂದರ್ಭದಲ್ಲಿ ಸಂಕಲ್ಪ ಅವರ ಹಾಜರಿಗೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ ಎಂದು ದೂರಿದ್ದಾರೆ.
ದೂರಿನ ಜೊತೆಗೆ ಸಂಕಲ್ಪ ಪಾಟೀಲ ಮತದಾನದ ಸಂದರ್ಭದಲ್ಲಿ ಹಾಜರಿದ್ದ ಫೋಟೀಗಳನ್ನೂ ಲಗತ್ತಿಸಿದ್ದರು. ಇದನ್ನು ಆಧರಿಸಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಬಬಲೇಶ್ವರ ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ವಾಟ್ಸಾಪ್ ಮೂಲಕ ದೂರಿನ ಸಂದೇಶ ರವಾನಿಸಿದ್ದರು.
ಇದನ್ನು ಆಧರಿಸಿ ಬಬಲೇಶ್ವರ ವಿಧಾನಸಭೆ ಚುನಾವಣಾ ಅಧಿಕಾರಿಗಳು ಸದರಿ ವೃದ್ಧರ ಅಂಚೆ ಮತದಾನದ ಕರ್ತವ್ಯದ ಸಂದರ್ಭದಲ್ಲಿ ಹಾಜರಿದ್ದ ಸೆಕ್ಟೆರ್ ಅಧಿಕಾರಿ ಸುರೇಶ ಪಾಟೀಲ, ಮತದಾನದ ಅಧಿಕಾರಿ ರೂಟ್ ನಂ. 12 ಹಾಗೂ ಮತದಾನ ಅಧಿಕಾರಿ ರೂ.ನಂ. 12 ಪಿ.ಪಿ.ಮಂಗಳೂರು ಇವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ಎ.29 ರಂದೇ ನೋಟೀಸ್ ನೀಡಿ, ನೋಟೀಸ್ ತಲುಪಿದ 12 ಗಂಟೆಯಲ್ಲಿ ಸಮಜಾಯಿಸಿ ನೀಡುವಂತೆ ಸೂಚಿಸಲಾಗಿದೆ. ಆದರೆ ಸದರಿ ಅಧಿಕಾರಿಗಳು ನೀಡಿದ ಸಮಜಾಯಿಸಿ ಏನು, ಸಬಂಧಿಸಿದ ಅಧಿಕಾರಿಗಳ ವಿರುದ್ಧ ಚುನಾವಣೆ ಕರ್ತವ್ಯ ಲೋಪದ ಆರೋಪ ಕುರಿತು ಮುಂದಿನ ಬೆಳವಣಿಗೆ ಏನು ಎಂಬುದು ಇನ್ನೂ ಬಹರಂಗವಾಗಿಲ್ಲ.
ಇದನ್ನೂ ಓದಿ: Wrestlers ವಿರುದ್ಧ ಬ್ರಿಜ್ ಭೂಷಣ್ ಆಕ್ರೋಶ: ಜಂತರ್ ಮಂತರ್ ನಲ್ಲಿ ನ್ಯಾಯ ಸಿಗುವುದಿಲ್ಲ