Advertisement
ಸರ್ಕಾರಿ ಆರ್‍ಎಂಎಸ್‍ಎ ಶಾಲೆಯ ನೂತನ ಕಟ್ಟಡ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಅರುಣ ಶಹಾಪೂರ ಅವರು ಮಾತನಾಡುತ್ತ ಇನ್ನೂ 6 ಸಚಿವರ ಸ್ಥಾನ ಖಾಲಿ ಇದೆ. ಸಚಿವ ಸಂಪುಟ ರಚನೆಯಾದ ಮೇಲೆ ಪಕ್ಷ 6 ಸ್ಥಾನ ಖಾಲಿ ಉಳಿಸಿಕೊಂಡು ಯಾರಿಗೆ ಕೊಡಬೇಕು ಅನ್ನೋ ಮೌಲ್ಯಮಾಪನ ಮಾಡುತ್ತಿದೆ. ಈ ಬಾರಿ ವಿಜಯಪುರ ಜಿಲ್ಲೆಗೂ ಮಂತ್ರಿ ಸ್ಥಾನ ಸಿಗುತ್ತದೆ. ಆ ಸ್ಥಾನ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿಯವರಿಗೆ ಸಿಕ್ಕರೆ ಸಂತೋಷ ಪಡುವವರಲ್ಲಿ ನಾನು ಮೊದಲಿಗನಾಗಿರುತ್ತೇನೆ ಎನ್ನುವುದನ್ನು ಬಹಿರಂಗವಾಗಿ ಹೇಳ್ತೇನೆ ಎಂದು ಜಿಲ್ಲೆಯ ಬಿಜೆಪಿ ರಾಜಕಾರಣದ ಅಂತರ್ಯ ಬಿಡಿಸಿಟ್ಟರು.
Related Articles
Advertisement
ಇದಕ್ಕೆ ಬಹಿರಂಗವಾಗಿಯೇ ಪ್ರತಿಕ್ರಿಯಿಸಿದ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ನಡಹಳ್ಳಿಯವರು, ನಾನು ಕಾಂಗ್ರೆಸ್‍ನಲ್ಲಿದ್ದರೂ (2008, 2013ರಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು) ಶಿಕ್ಷಕರ ಮತಕ್ಷೇತ್ರದಿಂದ ಪರಿಷತ್‍ಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅರುಣ ಶಹಾಪೂರಗೆ ಸಹಾಯ ಮಾಡಿದ್ದೆ. ಅದನ್ನು ಇವತ್ತು ಬಹಿರಂಗಪಡಿಸುತ್ತಿದ್ದೇನೆ.
ಎಬಿವಿಪಿಯ ಸಂಬಂಧ ನಮ್ಮಿಬ್ಬರದು. ಜಿಲ್ಲೆಗೆ ಮಂತ್ರಿ ಸ್ಥಾನ ಸಿಗಬೇಕು ಅನ್ನೋದು ಜಿಲ್ಲೆಯ ಜನರ ಮತ್ತು ಪಕ್ಷದ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಈ ಅಪೇಕ್ಷೆಯನ್ನು ಜಿಲ್ಲೆಯ ಹಿರಿಯರಾದ ರಮೇಶ ಜಿಗಜಿಣಗಿ ಅವರ ನೇತೃತ್ವದಲ್ಲಿ ಮಾಜಿ ಮಂತ್ರಿಗಳ, ಮಾಜಿ ಶಾಸಕರ ಸಹಕಾರದೊಂದಿಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಗೆ ಪ್ರಾತಿನಿಧ್ಯ ಕೊಡುವ ವಿಶ್ವಾಸ ಇದೆ ಎಂದು ತಮ್ಮ ಮನದಾಳದ ಮಾತನ್ನು ಹೊರಗೆಡವಿದರು.