ವಿಜಯಪುರ: ವಿಜಯಪುರ ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ ಅಶ್ಫಾಕ್ ಜಮಖಂಡಿ ಎಂಬವನನ್ನು ಪೊಲೀಸರು ಮಂಗಳವಾರ ಬೆಳಂಬೆಳಿಗ್ಗೆ ವಶಕ್ಕೆ ಪಡೆದು, ವಿಚಾರಣೆ ಆರಂಭಿಸಿದ್ದಾರೆ.
ನಗರದ ಜಾಮಿಯಾ ಮಜೀದ್ ರಸ್ತೆಯಲ್ಲಿರೋ ಅಶ್ಪಾಕ್ ಜಮಖಂಡಿ ಮನೆಯಲ್ಲಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಪಿಎಫ್ಐ ಸಂಘಟನೆ ಹೋರಾಟ, ಹಣಕಾಸಿನ ವ್ಯವಹಾರ ಸೇರಿದಂತೆ ಇತರೆ ವಿಷಯಗಳ ವಿಚಾರಣೆ ನಡೆಸುತ್ತಿರುವ ಪೊಲೀಸರು, ಸ್ಥಳೀಯ ವಿಚಾರಣೆ ಬಳಿಕ, ಅಗತ್ಯ ಎನಿಸಿದರೆ ಅಶ್ಫಾಕ್ ನನ್ನು ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪಿಎಫ್ಐ ಜಿಲ್ಲಾಧ್ಯಕ್ಷ ಆಶ್ಫಾಕ್ ಜಮಖಂಡಿ ಎಂಬಾತನನ್ನು ಬಂಧಿಸಿದ್ದಾಗಿ ವಿಜಯಪುರ ಎಸ್ಪಿ ಹೆಚ್.ಡಿ.ಆನಂದಕುಮಾರ ತಿಳಿಸಿದ್ದಾರೆ.
ಎನ್.ಐ.ಎ ದಾಳಿ ವಿರೋಧಿಸಿ ಹಾಗೂ ಇತರೆ ಪ್ರತಿಭಟನೆ, ಸಂಘಟನೆಯ ಆರ್ಥಿಕ ವಹಿವಾಟು ಸೇರಿದಂತೆ ಇತರೆ ಚಟುವಟಿಕೆ ಹಿನ್ನೆಲೆಯಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಬಂಧಿತನ ಪ್ರಾಥಮಿಕ ವಿಚಾರಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಪ್ರಕ್ರಿಯೆ ನಡೆಸಿದ್ದಾಗಿ ಎಸ್ಪಿ ಆನಂದಕುಮಾರ ಮಾಹಿತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.