ವಿಜಯಪುರ: ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ನೀರಿನ ಕೊರತೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಸಂವಾದ ನಡೆಸಿದ ಅವರು, ಉಪವಿಭಾಗಾಧಿ ಕಾರಿಗಳು, ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಪಂ ಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ಕ್ಷೇತ್ರ ಭೇಟಿ ನೀಡಿ ಪರಿಶೀಲಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಅವಶ್ಯಕತೆ ಇರುವ ಕಡೆ ಖಾಸಗಿ ಬೋರ್ ವೆಲ್ ಮಾಲೀಕರ ಸಹಾಯ ಪಡೆಯುವ ಬಗ್ಗೆ ಸೂಕ್ತ ಸಮೀಕ್ಷೆ ನಡೆಸಬೇಕು. ಅವಶ್ಯಕತೆ ಇದ್ದಾಗ ಮಾತ್ರ ಹಣ ಪೋಲಾಗದೆ ಬೋರ್‌ವೆಲ್ ಕೊರೆಯಿಸಲು ತಿಳಿಸಿದ ಅವರು, ಖಾಸಗಿ ಬೋರ್‌ವೆಲ್‌ಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಕುರಿತು ತಾಂತ್ರಿಕವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಕೋವಿಡ್-19 ಇರುವ ಹಿನ್ನೆಲೆಯಲ್ಲಿ ವಿವಿಧ ಗ್ರಾಮ ಮತ್ತು ತಾಂಡಾಗಳಲ್ಲಿ ವಲಸೆ ಹೋಗಿರುವ ಜನರು ಸಹ ಮರಳಿದ್ದು, ಯಾರಿಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎಸ್‌ಡಿಆರ್‌ಎಫ್ ಮತ್ತು ರಾಜ್ಯ ಅನುದಾನ ಒದಗಿಸುತ್ತಿದ್ದು, ನೈಜ ಕುಡಿಯುವ ನೀರಿನ ಸಮಸ್ಯೆ ಆಧಾರದ ಮೇಲೆ ಕ್ರಮ ಕೈಗೊಳ್ಳುವಂತೆ ಇಂಡಿ, ಸಿಂದಗಿ, ಮುದ್ದೆಬಿಹಾಳ ಹಾಗೂ ಇತರೆ ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು. ಈ ಎಲ್ಲ ಜವಾಬ್ದಾರಿಯನ್ನು ವಿಜಯಪುರ ಮತ್ತು ಇಂಡಿ ಉಪವಿಭಾಗಾಧಿ ಕಾರಿಗಳಿಗೆ ನೀಡಿದ್ದು, ಅವಶ್ಯಕತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕು. ಆಯಾ ತಹಶೀಲ್ದಾರರು, ತಾಲೂಕು ಕಾರ್ಯ ನಿರ್ವಹಣಾ ಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳು ಕ್ಷೇತ್ರಮಟ್ಟದಲ್ಲಿ ಭೇಟಿ ನೀಡಿ ಅವಶ್ಯಕ ಕ್ರಮ ಕೈಗೊಳ್ಳಲು ಸೂಚಿಸಿದರು.
ಜಿಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, ಜಲ ಸಂಪನ್ಮೂಲ ಲಭ್ಯ ಇರುವ ಕಡೆ ಬೋರ್‌ವೆಲ್ ಕೊರೆಯಲು, ಖಾಸಗಿ ಬೋರ್‌ವೆಲ್ ಸಹಕಾರ ಪಡೆದು ಜನರಿಗೆ ನೀರಿನ ಕೊರತೆಯಾಗದಂತೆ ನಿಗಾ ವಹಿಸಬೇಕು. ಈ ಹಿಂದಿನ ವಾಟರ್‌ಟ್ಯಾಂಕರ್ ಮೊಬೈಲ್ ಆ್ಯಪ್ ಸಾಫ್ಟ್‌ವೇರ್ ಶೇ.100 ಪುರ್ಣವಿಲ್ಲದ ಹಿನ್ನೆಲೆ ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಿ ಮ್ಯಾನುವಲ್ ಆಧಾರದ ಮೇಲೆ ಟ್ಯಾಂಕರ್ ಟ್ರೀಪ್ ಅಪ್‌ಡೆಟ್ ಮಾಡುವಂತೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿ ಕಾರಿ ಡಾ| ಔದ್ರಾಮ್, ಎಸಿ ಸೋಮಲಿಂಗ ಗೆಣ್ಣೂರು ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.