ವಿಜಯಪುರ: ಲಾಕ್‌ಡೌನ್ ಇದ್ದರೂ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದಲ್ಲದೇ, ಪಡಿತರ ಅಕ್ಕಿ ಹಾಗೂ ಗೋಧಿ ಹಂಚಿಕೆ ಆರಂಭಿಸಿದ್ದು, ಸಾಮಾಜಿಕ ಅಂತರ ಕಾಯುವುದು ಕಡ್ಡಾಯ. ಇದಲ್ಲದೇ ರೈತರ ಬೆಳೆ ಮಾರಾಟಕ್ಕೆ ಎಪಿಎಂಸಿ ಮಾರುಕಟ್ಟೆಯಲ್ಲಿ ಅವಕಾಶ ನೀಡಿದ್ದು, ಧ್ವನಿವರ್ಧಕದ ಮೂಲಕ ಕೊರೊನಾ ರೋಗದ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಪಡಿತರ, ತರಕಾರಿ ಮತ್ತು ಹಣ್ಣು, ಮೀನು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರೂ ಸಾಮಾಜಿಕ ಅಂತರ ಕಾಯುವುದು ಕಡ್ಡಾಯ. ಎಪಿಎಂಸಿ ಮಾರುಕಟ್ಟೆಯಲ್ಲಿ ಧ್ವನಿವರ್ಧಕದ ಮೂಲಕ ಕೊರೊನಾ ರೋಗ ನಿಯಂತ್ರಣಕ್ಕಾಗಿ ಮಾಸ್ಕ್ಧ ರಿಸಿವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ರೈತರು, ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು.
ದ್ರಾಕ್ಷಿ ಆನ್‌ಲೈನ್ ಟ್ರೇಡಿಂಗ್‌ಗೆ ತಕ್ಷಣ ಕ್ರಮಕೈಗೊಳ್ಳಬೇಕು. ದ್ರಾಕ್ಷಿ ಬೆಳೆಗಾರರಿಗೆ ಸುಲಭವಾಗಿ ಡಿಪ್ಪಿಂಗ್ ಆಯಿಲ್ ಸಿಗುವಂತೆ ವಿವಿಧ ರಾಜ್ಯಗಳೊಂದಿಗೆ ಸಂಪರ್ಕ ಮಾಡಿ, ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲೆಯಾದ್ಯಂತ ಮೀನು ಮಾರಾಟಕ್ಕೂ ಅವಕಾಶ ಕಲ್ಪಿಸಿದ್ದು, ಪಾರ್ಸಲ್ ಪಡೆಯಲು ಮಾತ್ರ ಅವಕಾಶವಿದ್ದು, ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಯಲಗೂರ ಗೋಶಾಲೆಯಲ್ಲಿರುವ 300 ಜಾನುವಾರುಗಳಿಗೆ ಉಂಟಾಗಿರುವ ಮೇವು-ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಗೆ 10 ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಇನನು 37 ಕೇಂದ್ರ ಶೀಘ್ರವೇ ಆರಂಭಿಸಬೇಕು. ಈಗಾಗಲೇ ತೊಗರಿ ಖರೀದಿ ಕೇಂದ್ರದಲ್ಲಿ 79 ಸಾವಿರ ರೈತರಿಂದ ಖರೀದಿಸಿದ್ದು, ಬಾಕಿ ಉಳಿದ ರೈತರ ತೊಗರಿ ಖರಿದೀಗೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಾದ್ಯಂತ ಕಳ್ಳಬಟ್ಟಿ ತಯಾರಿಕೆ ನಿಯಂತ್ರಣಕ್ಕೆ 283 ಕಡೆಗಳಲ್ಲಿ ದಾಳಿ ಮಾಡಲಾಗಿ, 18 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು. ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಅನುಪಮ್ ಅಗರವಾಲ್, ಎಡಿಸಿ ಡಾ| ಔದ್ರಾಮ್, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ| ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಸರ್ಜನ್ ಡಾ| ಶರಣಪ್ಪ ಕಟ್ಟಿ, ಸರ್ವೇಕ್ಷಣಾಧಿಕಾರಿ ಡಾ| ಎಂ.ಬಿ.ಬಿರಾದಾರ, ಆಹಾರ ಇಲಾಖೆಯ ಸುರೇಖಾ, ಡಾ| ಧಾರವಾಡಕರ, ಡಾ| ಲಕ್ಕಣ್ಣವರ್, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ ಇದ್ದರು.