ವಿಜಯಪುರ: ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿರುವ ಕೋವಿಡ್-19 ಕೊರೊನಾ ಸೋಂಕು ನಿಗ್ರಹಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ. ತೀವ್ರ ಶ್ವಾಸಕೋಶ ತೊಂದರೆ ಹಾಗೂ ನೆಗಡಿ, ಕೆಮ್ಮು, ಜ್ವರಕ್ಕೆ ಸಂಬಂಧಿಸಿದ ರೋಗಿಗಳಿಗೆ ಯೂನಾನಿ, ಆಯುರ್ವೇದ, ಹೋಮಿಯೊಪತಿಕ್ ವೈದ್ಯರು ಚಿಕಿತ್ಸೆ ನೀಡದೇ ತಜ್ಞ ವೈದ್ಯರ ಬಳಿಗೆ ಕಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ರೋಗ ನಿಗ್ರಹದ ಕುರಿತು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮತ್ತು ಖಾಸಗಿ ಆಸ್ಪತ್ರ ವೈದ್ಯರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ತೀವ್ರ ಶ್ವಾಸಕೋಶ ನೆಗಡಿ, ಕೆಮ್ಮು, ಜ್ವರದಂಥ ಸಮಸ್ಯೆ ಇರುವ ರೋಗಿಗಳು ತಮ್ಮ ಬಳಿಗೆ ಬಂದಲ್ಲಿ ತಕ್ಷಣ ತಜ್ಞ ವೈದ್ಯರ ಬಳಿ ಕಳುಹಿಸಿ ಕೊಡುವಂತೆ ಆದೇಶ ನೀಡಲಾಗಿದೆ. ಯುನಾನಿ, ಹೋಮಿಯೊಪತಿ, ಆಯುರ್ವೇದ ವೈದ್ಯರು ಇಂಥ ಲಕ್ಷಣ ಇರುವ ರೋಗಿಗಳಿಗೆ ಚಿಕಿತ್ಸೆ ನೀಡದೇ ತಜ್ಞ ವೈದ್ಯರ ಬಳಿಗೆ ಕಳಿಸಿ, ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕೋವಿಡ್ಉಪಚರಿಸಲು ಈಗಾಗಲೇ ಹಲವು ಕ್ರಮ ಕೈಗೊಂಡಿದೆ. ಆಯಾ ಖಾಸಗಿ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳು, ಫೀವರ್ ಕ್ಲಿನಿಕ್‌ಗಳು, ಕೋವಿಡ್ ಆಸ್ಪತ್ರೆಗಳು ಕಡ್ಡಾಯವಾಗಿ ದಾಖಲೀಕರಣ ಮಾಡಿಸಬೇಕು. ಕೊರೊನಾ ಸೋಂಕು ದೃಢಪಟ್ಟಿರುವ ರೋಗಿಗಳಿಗೆ ರೋಗ ಸಂಪೂರ್ಣ ವಾಸಿ ಆಗುವವರೆಗೆ ಸೂಕ್ತ ಚಿಕಿತ್ಸೆ ನೀಡಬೇಕು. ನೆಗೆಟಿವ್ ಕಂಡು ಬಂದರು ಕೂಡಾ ಎರಡು ಬಾರಿ ಗಂಟಲು ದ್ರವ ಪರೀಕ್ಷಿಸಿ ಸಂಪೂರ್ಣ ರೋಗಮುಕ್ತರಾದ ಬಗ್ಗೆ ತಜ್ಞ ವೈದ್ಯರು ಖಚಿತ ಪಡಿಸಿದ ಮೇಲೆಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂದೂ ನಿರ್ದೇಶನ ನೀಡಿದರು.
ಕೋವಿಡ್ ಸೋಂಕು ದೃಢಪಟ್ಟಿರುವ ನಗರದ ಗೋಲಗುಂಬಜ್ ಪ್ರದೇಶ ಹಾಗೂ ರತ್ನಾಪುರ ಗ್ರಾಮಗಳಲ್ಲಿ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಕುರಿತು ವಿವಿಧ ನೆಲೆಯಲ್ಲಿ ನಿಗಾ ಇರಿಸಬೇಕು. ರೋಗಿಗಳನ್ನು ಉಪಚರಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ಗಳಲ್ಲಿ ಆತ್ಮ ವಿಶ್ವಾಸದ ಜೊತೆಗೆ ತಮ್ಮ ಸುರಕ್ಷತೆಯೊಂದಿಗೆ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಕರ್ತವ್ಯದಲ್ಲಿರುವ ಎಎನ್ ಎಂ ಕಂಡೆನ್ಮೆಂಟ್ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರು, ಎಚ್ ಐವಿ, ಟಿಬಿ, ಡಯಾಬಿಟಿಸ್ ರೋಗಿಗಳ ಬಗ್ಗೆ ಹಾಗೂ ಲಕ್ಷಣ ಉಳ್ಳವರ ಬಗ್ಗೆ ಪಟ್ಟಿ ಒದಗಿಸಬೇಕು. ಲಕ್ಷಣಗಳು ಇರುವ ರೋಗಿಗಳಿಗೆ ಆಕ್ಸಿಜನ್ ವೆಂಟಿಲೇಟರ್ ಸೌಲಭ್ಯ ಕಲ್ಪಿಸಲು ಸೂಚಿಸಿದರು. ಜಿಪಂ ಸಿಇಒ ಗೋವಿಂದರೆಡ್ಡಿ, ಎಡಿಸಿ ಡಾ| ಔದ್ರಾಮ್, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ಜಿಲ್ಲಾಸ್ಪತ್ರೆ ಸರ್ಜನ್ ಡಾ| ಶರಣಪ್ಪ ಕಟ್ಟಿ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ| ಮಲ್ಲನಗೌಡ ಬಿರಾದಾರ ಇದ್ದರು.