ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ಸಂಭವಿಸಿದ್ದ ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐವರಲ್ಲಿ ಪಶ್ಚಿಮ ಬಂಗಾಳ ಮೂಲದ ಓರ್ವ ಕಾರ್ಮಿಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಮೃತ ಕಾರ್ಮಿಕನನ್ನು ಪಶ್ಚಿಮ ಬಂಗಾಳ ಮೂಲದ 21 ವರ್ಷದ ಸಂದೀಪ ಮಂಡಲ ಎಂದು ಗುರುತಿಸಲಾಗಿದೆ.
ಬಾಯ್ಲರ್ ಸ್ಫೋಟ ಘಟನೆಯಲ್ಲಿ ಗಾಯಗೊಂಡಿದ್ದ ಐವರು ಕಾರ್ಮಿಕರನ್ನು ವಿಜಯಪುರ ನಗರದ ಬಿ.ಎಲ್.ಡಿ.ಇ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಿಸದೇ ಸಂದೀಪ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಇತರೆ ಕಾರ್ಮಿಕರಾದ ಪರಸನಜಿತ ಮಂಡಲ, ರಾಜಕುಮಾರ ರಾಮ್ ಇವರ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ಇಬ್ಬರು ಕಾರ್ಮಿಕರು ಮಾತ್ರವಲ್ಲದೇ ಸಾಮಾನ್ಯ ಗಾಯಗಳಾಗಿರುವ ಇಮ್ರಾನ್ ಅನ್ಸಾರಿ ಹಾಗೂ ಅಲೋಕಕುಮಾರ ರಾಮ್ ಇವರಿಗೂ ಚಿಕಿತ್ಸೆ ಮುಂದುವರೆದಿದೆ.
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪುಣೆ ಮೂಲದ ಎಸ್.ಎಸ್.ಎಂಜಿನಿಯರ್ಸ್ ಗುತ್ತಿಗೆ ಸಂಸ್ಥೆಯಿಂದ ಹೊಸದಾಗಿ ನಿರ್ಮಿಸಿರುವ 220 ಟನ್ ಸಾಮರ್ಥ್ಯದ ಬಾಯ್ಲರ್ ಶನಿವಾರ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಈ ವೇಳೆ ಬಾಯ್ಲರ್ ಸ್ಫೋಟಗೊಂಡು ಐವರು ಕಾರ್ಮಿಕರು ಗಾಯಗೊಂಡಿದ್ದರು.