ಮುದ್ದೇಬಿಹಾಳ: ನವಜಾತ ಶಿಶುವಿನೊಂದಿಗೆ ತಮ್ಮೂರಿಗೆ ಹೋಗಲು ಬಸ್ ಇಲ್ಲದೆ ಪರದಾಡುತ್ತಿದ್ದ ಬಾಣಂತಿ ಶಂಕ್ರಮ್ಮ ನಾಲತವಾಡ ಎಂಬಾಕೆಯನ್ನು ಆಕೆಯ ಕುಟುಂಬದ ಸದಸ್ಯರ ಸಮೇತವಾಗಿ ಬಸ್ ವ್ಯವಸ್ಥೆ ಕಲ್ಪಿಸಿ ಆಕೆಯ ಊರಿಗೆ ತಲುಪಿಸುವ ಮೂಲಕ ಇಲ್ಲಿನ ಸಾರಿಗೆ ಘಟಕದ ಸಿಬ್ಬಂದಿ ಮಾನವೀಯತೆ ಮೆರೆದ ಘಟನೆ ಶನಿವಾರ(ಜುಲೈ 31)ತಡ ರಾತ್ರಿ ನಡೆದಿದೆ.
ಮುದ್ದೇಬಿಹಾಳದಿಂದ ತಮ್ಮೂರು ನಾರಾಯಣಪೂರಕ್ಕೆ ಹೋಗಲು ಬಸ್ಸಿಲ್ಲದೇ ರಾತ್ರಿ 10 ಗಂಟೆ ಸುಮಾರಿಗೆ ಇವರೆಲ್ಲ ಬಸ್ ನಿಲ್ದಾಣದಲ್ಲಿ ಉಳಿದುಕೊಂಡಿದ್ದರು. ಮಗುವಿನ ಆರೋಗ್ಯ ಸರಿ ಇರಲಿಲ್ಲ. ಚಳಿಯಲ್ಲೆ ನಡುಗುತ್ತ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ತನ್ನ ಗಂಡ ಹಾಗೂ ತಾಯಿಯ ಜೊತೆ ಕುಳಿತಿದ್ದರು. ಕೋವಿಡ್ ಕಾರಣದಿಂದ ರಾತ್ರಿ 9.30 ಕ್ಕೆ ಮುದ್ದೇಬಿಹಾಳ ಘಟಕದಿಂದ ನಾರಾಯಣಪುರವರೆಗೆ ಹೋಗುತ್ತಿದ್ದ ವಸ್ತೀ ಬಸ್ ರದ್ದಾಗಿ ಬೇರೆ ಸೌಕರ್ಯ ಇರಲಿಲ್ಲ. ರಾತ್ರಿಯೇ ಹೋಗುತ್ತಿದ್ದ ಸೊಲ್ಲಾಪುರ ರಾಯಚೂರು ಬಸ್ ಕೂಡ ರದ್ದಾಗಿ ತೀವ್ರ ಚಿಂತೆಯಲ್ಲಿದ್ದರು.
ಇದನ್ನೂ ಓದಿ : ಜುಲೈ ಮುಗಿದಿದೆ,ಲಸಿಕೆಗಳ ಕೊರತೆ ಇನ್ನೂ ನೀಗಿಲ್ಲ : ಕೇಂದ್ರದ ವಿರುದ್ಧ ರಾಹುಲ್ ಟ್ವೀಟಾಸ್ತ್ರ
ಪರ್ಯಾಯ ವ್ಯವಸ್ಥೆಯೂ ಇಲ್ಲದೆ ಮಗು ಸಮೇತ ನಿಲ್ದಾಣದಲ್ಲಿಯೇ ರಾತ್ರಿ ಕಳೆಯಬೇಕಾದ ಸ್ಥಿತಿ ತಲೆದೋರಿತ್ತು. ವಿಷಯ ತಿಳಿದ ಹಸಿರು ತೋರಣ ಬಳಗದ ಸದಸ್ಯ ಮಹಾಬಲೇಶ್ವರ ಗಡೇದರು ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿ ಬಾಣಂತಿ ಹಾಗೂ ಮಗುವನ್ನು ಅವರೂರಿಗೆ ಕಳಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಪರಿಸ್ಥಿತಿ ಅರಿತ ಘಟಕ ವ್ಯವಸ್ಥಾಪಕ ರಾಹುಲ ಹೊನಸೂರೆ ಅವರು ರಾತ್ರಿಯ ವೇಳೆ ಘಟಕದಲ್ಲಿ ಕರ್ತವ್ಯದ ಮೇಲಿದ್ದ ನಿಯಂತ್ರಣಾಧಿಕಾರಿ ನಿಂಗಣ್ಣ ತಳವಾರ ಅವರಿಗೆ ಸೂಚಿಸಿ ಏನಾದರೂ ಪ್ರಯತ್ನ ಮಾಡಿ ಯಾವುದಾದರೂ ಬಸ್ ಮಾಡಿ ಕಳಿಸುವಂತೆ ಸೂಚಿಸಿದರು.
ತಣ್ಣನೆಯ ಗಾಳಿ ಬೀಸುತ್ತ ಚಳಿಯಲ್ಲಿ ಚಡಪಡಿಸುತ್ತಿದ್ದ ಮಗುವನ್ನು ಕಂಡಾಕ್ಷಣ ನಿಂಗಣ್ಣ ತಳವಾರ ಅವರೂ ತಡ ಮಾಡದೇ ಅವರಿವರನ್ನು ವಿಚಾರಿಸುತ್ತ ನಡೆದರು. ಹೊರಗಿನಿಂದ ಬಂದು ವಸ್ತಿ ಮಾಡಿರುವ ಬಸ್ಸಿನವರು ಈ ಕೆಲಸ ಮಾಡಲು ಒಪ್ಪುವುದಿಲ್ಲ ನಮ್ಮ ಡಿಪೋದವರೇ ಇದನ್ನು ಮಾಡಬೇಕು ಎನ್ನುವ ವಿಚಾರ ತಿಳಿದುಕೊಂಡರು. ಒಪ್ಪಂದದ ಮೇಲೆ ( ಸಿಸಿ) ಬೇರೆ ಕಡೆ ಹೊರಟಿದ್ದ ಬಸ್ಸಿನ ಚಾಲಕ ಆರ್.ಎಸ್.ಹೂಗಾರ ಅವರು ನೆರವಿಗೆ ಬಂದರು.
ತಳವಾರ ಅವರು ಬಾಣಂತಿ ಸಮೇತ ಬಸ್ಸಿಗಾಗಿ ಕಾಯುತ್ತಿದ್ದ 13 ಜನರಿಗೆ ತಾವೇ ಟಿಕೇಟ್ ಕೊಟ್ಟು ಊರು ತಲುಪಿಸುವ ವ್ಯವಸ್ಥೆ ಮಾಡಿದರು. ರಾತ್ರಿ 8.30 ರ ನಂತರ ನಾಲತವಾಡ, ವೀರೇಶ ನಗರ, ನಾರಾಯಣಪೂರಕ್ಕೆ ಹೋಗುವವರಿಗೆ ಮೊದಲು ಇದ್ದ ರಾತ್ರಿ 9.30 ರ ನಾರಾಯಣಪೂರ ವಸ್ತಿ ಬಸ್ ಮತ್ತೆ ಶುರು ಮಾಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.
ಇದನ್ನೂ ಓದಿ : ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!