Advertisement

ವಿಜಯಪುರ:ಮುಷ್ಕರ ಮಧ್ಯೆ ಓಡಿವೆ ಇನ್ನೂರಕ್ಕೂ ಹೆಚ್ಚು ಬಸ್‌

07:25 PM Apr 08, 2021 | Nagendra Trasi |

ವಿಜಯಪುರ:ಮುಷ್ಕರ ಮಧ್ಯೆ ಓಡಿವೆ ಇನ್ನೂರಕ್ಕೂ ಹೆಚ್ಚು ಬಸ್‌ ವಿಜಯಪುರ: 6ನೇ ವೇತನ ನೀಡಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರ ಒಕ್ಕೂಟದ ಕರೆ ಮೇರೆಗೆ ಸಾರಿಗೆ ಸಂಸ್ಥೆ ನೌಕರರು ಬುಧವಾರದಿಂದ ಆರಂಭಿಸಿರುವ ಮುಷ್ಕರದ ಬಿಸಿ ಬಸವನಾಡಿಗೂ ತಟ್ಟಿದೆ. ಆದರೆ ಮುಷ್ಕರದ ಹೊರತಾಗಿಯೂ
ಜನಸಂದಣಿ ಇರುವ ಕಡೆಗಳಲ್ಲಿ ಸಾರಿಗೆ ಸಂಸ್ಥೆಯ 237 ಬಸ್‌ ಸೇವೆ ನೀಡಿವೆ. ಖಾಸಗಿ ಬಸ್‌ ಹೊರತಾಗಿ ಇತರೆ ಪ್ರಯಾಣಿಕರ ಸಾರಿಗೆ ಸೇವೆ ಎಗ್ಗಿಲ್ಲದೇ ಸಾಗಿದ್ದು ದುಬಾರಿ ದರಕ್ಕೆ ಪ್ರಯಾಣಿಕರು ಹೈರಾಣಾಗಿದ್ದಾರೆ.

Advertisement

ಮುಷ್ಕರ ಆರಂಭಕ್ಕೆ ಮುನ್ನ ಜಿಲ್ಲೆಯಲ್ಲಿ ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ ಎಂದಿದ್ದ ಸಾರಿಗೆ ಸಂಸ್ಥೆ ನೌಕರರು ಬುಧವಾರ ಕರ್ತವ್ಯಕ್ಕೆ ಗೈರಾಗುವ ಮೂಲಕ ಏಕಾಏಕಿ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಬೆಳಗ್ಗೆ ವಿಜಯಪುರ ಜಿಲ್ಲಾ ಕೇಂದ್ರದಿಂದ ಇಂಡಿ, ಸಿಂದಗಿ, ಮುದ್ದೇಬಿಹಾಳ ಭಾಗಕ್ಕೆ ಕೆಲವು ಬಸ್‌ ಸಂಚಾರ ಆರಂಭಿಸಿದರೂ ಜಿಲ್ಲಾ ಕೇಂದ್ರ ಹಾಗೂ ಇತರೆ ತಾಲೂಕುಗಳ ಮಧ್ಯೆ ಬಸ್‌ ಸಂಚಾರ ಆರಂಭಗೊಳ್ಳಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಬಸ್‌ ನಿಲ್ದಾಣಗಳಲ್ಲಿ, ಡಿಪೋ ಎದುರಿಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರೂ ಜಿಲ್ಲಾ ಕೇಂದ್ರದ ಹೊರತಾಗಿ ಇತರೆಡೆಗಳಿಂದ ಬಸ್‌ ಓಡಿಸಲು ಸಿಬ್ಬಂದಿ ಮುಂದೆ ಬರಲಿಲ್ಲ. ಹೀಗಾಗಿ ವಾಸ್ತವ್ಯ ಮುಗಿಸಿ ಕೇಂದ್ರ ಸ್ಥಾನಕ್ಕೆ ಮರಳಿದ ಬಸ್‌ ಗಳನ್ನು ಡಿಪೋ-ನಿಲ್ದಾಣಗಳಲ್ಲಿ ನಿಲ್ಲಿಸಿದ ಸಿಬ್ಬಂದಿ ಕರ್ತವ್ಯಕ್ಕೆ ಗೈರಾದರು. ಇದರಿಂದ ದೂರದ ಊರುಗಳಿಂದ ಜಿಲ್ಲೆಯ
ವಿವಿಧ ಬಸ್‌ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರಿಗೆ ತಮ್ಮ ಊರಿಗೆ ಹೋಗಲು ಪರದಾಡುವಂತಾಯಿತು.

ಮುಷ್ಕರದ ಮಧ್ಯೆಯೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಲ್ಲಿರುವ 671 ಬಸ್‌ ಗಳಲ್ಲಿ ಕೇವಲ 235 ಬಸ್‌ಗಳು ಮಾತ್ರ ಸಂಚಾರ ನಡೆಸಿವೆ. ಮಂಗಳವಾರದಿಂದಲೇ ಸಂಚಾರ ಆರಂಭಿಸಿದ್ದ ಬಸ್‌ಗಳ ಹೊರತಾಗಿ ಮುಷ್ಕರದ ಮಧ್ಯೆ ಮತ್ತೆ ಸಾರಿಗೆ ಸಂಸ್ಥೆಯ 37 ಬಸ್‌ ಸಂಚಾರ ನಡೆಸಿವೆ. ಮಹಾರಾಷ್ಟ್ರದ ಸೊಲ್ಲಾಪುರ, ಲಾತೂರ, ಮಿರಜ್‌, ಸಾಂಗ್ಲಿಗೆ ಭಾಗದಲ್ಲಿ 8 ಬಸ್‌, ಶ್ರೀಶೈಲ ಕ್ಷೇತ್ರಕ್ಕೆ 5 ಬಸ್‌ ಓಡಿದ್ದು, ಇನ್ನೂ 10 ಬಸ್‌ ಓಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ 80 ಮ್ಯಾಕ್ಸಿಕ್ಯಾಬ್‌ ಮಾತ್ರ ಓಡಿಸಲಾಗಿದೆ. ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ಓಡಾಟಕ್ಕೆ ಅವಕಾಶ ಮಾಡಿಕೊಡಲು ಮುಂದಾದರೂ ವಿಜಯಪುರ ಜಿಲ್ಲೆ ರಸ್ತೆ ರಾಷ್ಟ್ರೀಕರಣವಾಗಿದೆ.

ಹೀಗಾಗಿ ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇವೆ. ಆದರೆ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವ ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ ಸಂಚಾರ ಆರಂಭಿಸಿದ್ದು, ಇದನ್ನು ಇನೂ ಹೆಚ್ಚಿಸಲು ವಾಹನಗಳ ಮಾರ್ಗ ಪರವಾನಿಗೆ, ಲೈಸೆನ್ಸ್‌, ತೆರಿಗೆಯಂಥ ನಿಯಮಗಳಿಗೆ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ.

ಮುಷ್ಕರದ ಹಿನ್ನೆಲೆಯಲ್ಲಿ ಮೊದಲ ದಿನ ದೂರದಿಂದ ಬಂದ ಪ್ರಯಾಣಿಕರಿಗೆ ಸಮಸ್ಯೆ ಆಗಿದೆಯೇ ಹೊರತು ಜಿಲ್ಲೆಯಲ್ಲಿ ಪ್ರಯಾಣಿಕರ ಒತ್ತಡ ಎಲ್ಲೂ ಕಂಡು ಬಂದಿಲ್ಲ. ಹೀಗಾಗಿ ಪ್ರಯಾಣಿಕರ ಕೊರತೆಯ ಕಾರಣ ಸೇವೆ ನೀಡಿದ ಖಾಸಗಿ ವಾಹನಗಳ ಮಾಲೀಕರು ದುಪ್ಪಟ್ಟು ದರ ಪಡೆಯುವ ಮೂಲಕ ಪರಿಸ್ಥಿತಿಯ ದುರ್ಲಾಭ ಪಡೆಯಲು ಮುಂದಾದ ಘಟನೆಯೂ ಬೆಳಕಿಗೆ ಬಂದವು. ಆದರೆ ಮೊದಲ ದಿನ ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಆದ್ಯತೆ ನೀಡುವ
ಉದ್ಧೇಶದಿಂದ ಅಧಿಕಾರಿಗಳ ಕ್ರಮ ಕೈಗೊಳ್ಳುವ ಬದಲು ಎಚ್ಚರಿಕೆ ನೀಡಿದ್ದು, ನಾಳೆಯಿಂದ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

Advertisement

ಈ ಮಧ್ಯೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಮುಂದುವರಿದರೆ ಜಿಲ್ಲೆಯಾದ್ಯಂತ ಇರುವ 250 ಮ್ಯಾಕ್ಸಿಕ್ಯಾಬ್‌, ಮಿನಿ ಬಸ್‌, ಟ್ಯಾಕ್ಸಿ ಸೇರಿ 250 ವಾಹನಗಳನ್ನು ತೆರಿಗೆ, ಲೈಸೆನ್ಸ್‌ ನೀಡಿಕೆಯಂಥ ಎಲ್ಲ ನಿಯಮ ಸಡಿಲಿಸಿ ಸಾರಿಗೆ ಸೇವೆಗೆ ಬಳಸಲು ಯೋಜಿಸಲಾಗಿದೆ. ಈ ಮಧ್ಯೆ ಮುಷ್ಕರ ಮುಂದುವರಿದು ಜಿಲ್ಲೆಯಲ್ಲಿ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಿದರೆ ಜಿಲ್ಲೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಸುಮಾರು 500 ಬಸ್‌ಗಳ ಸೇವೆ ಬಳಸಲು ಯೋಜಿಸಲಾಗಿದೆ. ಖಾಸಗಿ
ಶಾಲೆಗಳಿಗೆ ಕೋವಿಡ್‌ ಹಿನ್ನೆಲೆಯಲ್ಲಿ ತರಗತಿ ನಡೆಸದಂತೆ ಸರ್ಕಾರ ನಿರ್ದೇಶನ ನೀಡಿದೆ. ತೆರಿಗೆ ಕಡಿಮೆ ಇರುವ ಖಾಸಗಿ ಶಾಲೆಗಳ ಬಸ್‌ಗಳನ್ನು ಓಡಿಸುವ ಮೂಲಕ ತಮ್ಮ ಸಂಸ್ಥೆಗಳಿಗೆ ಕೋವಿಡ್‌ ಆರ್ಥಿಕ ಕೊರತೆ ನೀಗಿಸಿಕೊಳ್ಳಲು ನೆರವಾಗಲಿದೆ. ಒಂದೊಮ್ಮೆ ಗುರುವಾರ ಸಾರಿಗೆ ನೌಕರರ ಮುಷ್ಕರ  ಮುಂದುವರಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ವಿಜಯಪುರ ಜಿಲ್ಲೆಯಲ್ಲಿ ಮುಷ್ಕರದ ಮಧ್ಯೆಯೂ ಬುಧವಾರ ಜಿಲ್ಲೆಯ ಬಹುತೇಕ ಎಲ್ಲೆಡೆ ಬಸ್‌ ಓಡಿವೆ. ಪ್ರಯಾಣಿಕರ ಕೊರತೆ ಕಾರಣ ಕೇವಲ 235
ಬಸ್‌ ಮಾತ್ರ ಓಡಿದ್ದು, ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್‌ ಸಂಖ್ಯೆ ಹೆಚ್ಚಿಸಲಾಗುತ್ತಿದ್ದು ಜಿಲ್ಲೆಯಲ್ಲಿ ಜನ ಸಹಕರಿಸುತ್ತಿದ್ದಾರೆ.
ನಾರಾಯಣಪ್ಪ ಕುರುಬರ, ವಿಭಾಗೀಯ
ನಿಯಂತ್ರಣಾಧಿಕಾರಿ ಈ.ಕ.ರ.. ಸಾರಿಗೆ ಸಂಸ್ಥೆ,
ವಿಜಯಪುರ ವಿಭಾಗ

ವಿಜಯಪುರ ರಸ್ತೆ ರಾಷ್ಟ್ರೀಕರಣ ಜಿಲ್ಲೆಯಾಗಿರುವ ಕಾರಣ ಖಾಸಗಿ ಬಸ್‌ಗಳ ಸಂಖ್ಯೆ ಇಲ್ಲಿ ವಿರಳವಾಗಿದೆ. ಇದರ ಮಧ್ಯೆ ಬಹುತೇಕ ಎಲ್ಲ ನಿಯಮ ಸಡಿಲಿಕೆ ಮಾಡಿ ಖಾಸಗಿಯವರು ಮ್ಯಾಕ್ಸಿಕ್ಯಾಬ್‌, ಮಿನಿಬಸ್‌ ಓಡಿಸಲು ಅವಕಾಶ ಕಲ್ಪಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ನಾಳೆ ಖಾಸಗಿ ಶಾಲೆ ಬಸ್‌ ಓಡಿಸುವ ಕುರಿತು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆಗೆ ಯೋಜಿಸುತ್ತೇವೆ.
ಆನಂದ ಪಾರ್ಥನಳ್ಳಿ,
ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next