Advertisement

ವಿಜಯಪುರ : ಕಾಂಗ್ರೆಸ್, ಬಿಜೆಪಿ ಅವಿರೋಧ ಆಯ್ಕೆ ಕನಸು ಭಗ್ನ

08:15 PM Nov 26, 2021 | Team Udayavani |

ವಿಜಯಪುರ : ಸ್ಥಳೀಯ ಸಂಸ್ಥೆಗಳ ಮೇಲ್ಮನೆಯ ವಿಜಯಪುರ ದ್ವಿ ಸದಸ್ಯತ್ವ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆಗೆ ಎರಡೂ ಪಕ್ಷಗಳ ನಾಯಕರು ನಡೆಸಿದ ಕಸರತ್ತು, ಹರಿಸಿದ ಬೆವರು ಫಲ ನೀಡಿಲ್ಲ. ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ 10 ಪಕ್ಷೇತರರಲ್ಲಿ ಐವರು ಕಣದಲ್ಲಿ ಉಳಿದ ಕಾರಣ ಏಳು ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿಯುವ ಮೂಲಕ ಚುನಾವಣೆ ರಂಗೇರುವಂತೆ ಮಾಡಿದೆ.
ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಿಜಯಪುರ ಕ್ಷೇತ್ರ ಎರಡು ಸದಸ್ಯತ್ವದ ಕ್ಷೇತ್ರವಾಗಿದ್ದರೂ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ತಲಾ ಒಬ್ಬೊಬ್ಬರನ್ನೇ ಕಣಕ್ಕಿಳಿಸಿವೆ. ಹೀಗಾಗಿ ಸ್ಪರ್ಧೆ ಬಯಸಿ 10 ಸ್ವತಂತ್ರರು ಉಮೇದುವಾರಿಕೆ ಸಲ್ಲಿಸಿದ್ದರು. ಇದರಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಗಳೂ ಒಂದಿಬ್ಬರು ಸೇರಿದ್ದರು.

Advertisement

ಹೀಗಾಗಿ ಸ್ವತಂತ್ರ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಿದರೆ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಯೋಜಿತ ವ್ಯವಸ್ಥೆಯಂತೆ ಕಾಂಗ್ರೆಸ್ ಪಕ್ಷದ ಸುನಿಲಗೌಡ ಹಾಗೂ ಬಿಜೆಪಿ ಪಕ್ಷದ ಪಿ.ಎಚ್.ಪೂಜಾರ ಅವರ ಅವಿರೋಧ ಆಯ್ಕೆ ಮೂಲಕ ತಲಾ ಒಂದೊಂದು ಸ್ಥಾನ ಪಡೆಯುವ ಚಿಂತನೆಯಲ್ಲಿದ್ದವು. ಇದಕ್ಕಾಗಿ ಪಕ್ಷೇತರರನ್ನು ಕಣದಿಂದ ಹಿಂದೆ ಸರಿಸುವ ಕಸರತ್ತು ನಾಮಪತ್ರ ಹಿಂಪಡೆಯುವ ಕೊನೆ ಕ್ಷಣವಾದ ಶುಕ್ರವಾರ ಮಧ್ಯಾಹ್ನ 3 ಗಂಟೆ ವರೆಗೂ ನಡೆದೇ ಇತ್ತು. ಆದರೆ ಹತ್ತರಲ್ಲಿ ಐವರನ್ನು ಕಣದಿಂದ ಹಿಂದೆ ಸರಿಸುವಲ್ಲಿ ಯಶಸ್ವಿಯಾದರೂ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಓರ್ವ ಪಕ್ಷೇತರನ ಹಠ ಇತರೆ ನಾಲ್ವರು ಕಣದಲ್ಲಿ ಉಳಿಯುವಂತೆ ಮಾಡಿದ್ದಲ್ಲದೇ, ಚುನಾವಣೆಯಲ್ಲಿ ಮತದಾನ ನಡೆಯುವಂತೆ ಮಾಡಿದೆ.

ಐವರಿಂದ ನಾಮಪತ್ರ ವಾಪಸ್ : ಪಕ್ಷಗಳ ನಾಯಕರ ಮನವೊಲಿಕೆಯಿಂದಾಗಿ ಕಾಶೀಮ್‍ಸಾಬ ಪಟೇಲ್ ಮೂಕಿಹಾಳ, ಬಸವರಾಜ ಯರನಾಳ, ಮಾರುತಿ ಜಮೀನ್ದಾರ ಈಗಾಗಲೇ ನಾಮಪತ್ರ ಹಿಂಪಡೆದಿದ್ದರು. ಮುಖಂಡರ ಮನವೊಲಿಕೆಗೆ ಮಣಿದು ಶುಕ್ರವಾರ ಗುರುಲಿಂಗಪ್ಪ, ಗೊಲ್ಲಾಳಪ್ಪ ಪಾಟೀಲ ಕೂಡ ನಾಮಪತ್ರ ಹಿಂಪಡೆದರು.

ಅಂತಿಮವಾಗಿ ಸುನೀಲಗೌಡ ಪಾಟೀಲ (ಕಾಂಗ್ರೆಸ್), ಪಿ.ಎಚ್. ಪೂಜಾರ (ಬಿಜೆಪಿ), ಪಕ್ಷೇತರರಾದ ಮಲ್ಲಿಕಾರ್ಜುಣ ಲೋಣಿ, ಮಲ್ಲಿಕಾರ್ಜುನ ಕೆಂಗನಾಳ, ಕಾಂತಪ್ಪ ಇಂಚಗೇರಿ, ಶ್ರೀಮಂತ ಬಾರಿಕಾಯಿ, ದುರ್ಗಪ್ಪ ಸಿದ್ಧಾಪೂರ ಇವರು ಸ್ಪರ್ಧಾ ಕಣದಲ್ಲಿದ್ದು, ಚುನಾವಣೆಯಲ್ಲಿ ಮತದಾನ ನಡೆಯುವಂತೆ ಮಾಡಿದೆ.

ಸಿ.ಎಂ. ಮನವೊಲಿಕೆ ಯಶಸ್ವಿ 

Advertisement

ಪಕ್ಷೇತರರಾಗಿದ್ದ ಸ್ಪರ್ಧಾ ಕಣದಲ್ಲಿದ್ದ ಬಿಜೆಪಿ ಪಕ್ಷದ ಗುರುಲಿಂಗಪ್ಪ ಅಂಗಡಿ ಅವರನ್ನು ಮನವೊಲಿಸುವಲ್ಲಿ ಬಿಜೆಪಿ ಜಿಲ್ಲೆಯ ನಾಯಕರ ಹೊರತಾಗಿ ಸ್ವಯಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಪ್ರವೇಶ ಮಾಡುವಂತಾಗಿತ್ತು. ಅಷ್ಟರ ಮಟ್ಟಿಗೆ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿತ್ತು.
ಸಿದ್ದು, ಡಿಕೆ ಸಂಧಾನ ವಿಫಲ : ಕಾಂಗ್ರೆಸ್ ವರಿಷ್ಠರಾದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಂಥ ವರಿಷ್ಠರೇ ಕರೆ ಮಾಡಿ ಮನವೊಲಿಕೆಗೆ ಯತ್ನಿಸಿದರೂ ಲೋಣಿ ಬಗ್ಗಲೇ ಇಲ್ಲ. ಆದರೆ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಹಾಗೂ ಕಳೆದ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಮಲ್ಲಿಕಾರ್ಜುನ ಲೋಣಿ ಸ್ವಾಭಿಮಾನಕ್ಕಾಗಿ ಸ್ಪರ್ಧೆ ಎಂದು ಹಠ ಹಿಡಿದವರು ಬಗ್ಗಲೇ ಇಲ್ಲ. ಇದರಿಂದಾಗಿ ಇತರೆ ನಾಲ್ವರನ್ನು ಮನವೊಲಿಸುವಲ್ಲಿ ಬಹುತೇಕ ಯಶಸ್ಸು ಕಂಡಿದ್ದ ಸಂದಾನವೂ ಅರ್ಥಹೀನವಾಗಿ, ಅವರೂ ಕಣದಲ್ಲಿ ಉಳಿಯುವಂತಾಗಿದೆ ಎಂದು ಕೈ ಕೈ ಹಿಚುಕಿಕೊಳ್ಳುವಂತಾಗಿದೆ.

ವರಿಷ್ಠರ ಕರೆಗೂ ಮಣಿಯದ ಲೋಣಿ 

ಕಾಂಗ್ರೆಸ್ ವರಿಷ್ಠರೇ ಕರೆ ಮಾಡಿದರೂ ಮಲ್ಲಿಕಾರ್ಜುನ ಲೋಣಿ ಮಣಿಯಲಿಲ್ಲ. ಕಾರಣ ಇವರ ಜೊತೆಗೆ ಪಕ್ಷೇತರ ಸ್ಪರ್ಧಿಗಳಾದ ಕಳೆದ ಬಾರಿಯ ಜೆಡಿಎಸ್ ಪರಾಜಿತ ಸ್ಪರ್ಧಿ ಕಾಂತಪ್ಪ ಇಂಚಗೇರಿ, ಮಲ್ಲಿಕಾರ್ಜುನ ಕೆಂಗನಾಳ, ಶ್ರೀಮಂತ ಬಾರಿಕಾಯಿ, ದುರ್ಗಪ್ಪ ಸಿದ್ಧಾಪೂರ ಇವರು ಕೂಡ ಸ್ಪರ್ಧೆಯಿಂದ ಹಿಂದೆ ಸರಿಯದೇ ಚುನಾವಣೆಯ ಮತದಾತದ ರಣಕಣ ಸೃಷ್ಟಿಸಿದ್ದಾರೆ.

ಹೀಗಾಗಿ ಅವಿರೋಧ ಆಯ್ಕೆಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸದಸ್ಯ ಸುನಿಲಗೌಡ ಪಾಟೀಲ, ಮಾಜಿ ಶಾಸಕ ಬಿಜೆಪಿ ಸ್ಪರ್ಧಿ ಪಿ.ಎಚ್.ಪೂಜಾರ ಅವರು ಚುನಾವಣೆ ಎದುರಿಸುವುದು ಅನಿವಾರ್ಯವಾಗಿದೆ.

ಕಣದಿಂದ ಹಿಂದೆ ಸರಿಯುವಂತೆ ಸ್ವಯಂ ಸಿ.ಎಂ. ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರೇ ಕರೆ ಮಾಡಿದ್ದರು. ಆದರೆ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಪವಿತ್ರ ಮತದಾನ ಅವಕಾಶ ತಪ್ಪಿಸಬಾರದೆಂದು ಕಣದಲ್ಲಿ ಉಳಿದಿದ್ದೇನೆ. ಮತದಾರರ ಸ್ವಾಭಿಮಾನದ ಪ್ರತೀಕವಾಗಿ ಕಣದಲ್ಲುಳಿದು ಚುನಾವಣೆಯಲ್ಲಿ ಮತದಾನ ನಡೆಯುವಂತೆ ಮಾಡಿದ್ದೇನೆ.
ಮಲ್ಲಿಕಾರ್ಜುನ ಲೋಣಿ,
ಪಕ್ಷೇತರ ಅಭ್ಯರ್ಥಿ

ಎನ್‍ಟಿಪಿಸಿ ವಿರುದ್ಧ, ವಿದ್ಯುತ್ ಸಮಸ್ಯೆ ವಿರುದ್ಧ ರಾಜಿ ರಹಿತ ಹೋರಾಟದಿಂದ ಜೈಲಿಗೂ ಹೋಗಿ ಬಂದಿದ್ದೇನೆ. ಬದ್ದತೆಯ ಹೋರಾಟ ಮಾಡಿಕೊಂಡು ಬಂದಿರುವ ನನ್ನ ಸಾಮಾಜಿಕ ಕಾಳಜಿ ಅವಳಿ ಜಿಲ್ಲೆಗಳ ಜನರಿಗೆ ತಿಳಿದಿದೆ. ಇದೀಗ ಸ್ಥಳೀಯ ಸಂಸ್ಥೆಗಳ ಸದಸ್ಯರ ಗೌರವ ಕಾಯುವುದಕ್ಕಾಗಿ ಸದನದಲ್ಲಿ ಧ್ವನಿಯಾಗಲು ಸ್ಪರ್ಧೆಗೆ ಇಳಿದಿದಿದ್ದು, ಒತ್ತಡಗಳಿಗೆ ಮಣಿಯದೇ ಚುನಾವಣೆ ಎದುರಿಸಲು ಸನ್ನದ್ಧನಾಗಿದ್ದೇನೆ.
ಮಲ್ಲಿಕಾರ್ಜುನ ಕೆಂಗನಾಳ,
ಪಕ್ಷೇತರ ಅಭ್ಯರ್ಥಿ.

ವಿಜಯಪುರ ದ್ವಿಸದಸ್ಯ ಕ್ಷೇತ್ರದ ಅಂತಿಮ ಸ್ಪರ್ಧಿಗಳು :
ಸುನೀಲಗೌಡ ಪಾಟೀಲ (ಕಾಂಗ್ರೆಸ್), ಪಿ.ಎಚ್. ಪೂಜಾರ (ಬಿಜೆಪಿ), ಪಕ್ಷೇತರರಾದ ಮಲ್ಲಿಕಾರ್ಜುಣ ಲೋಣಿ, ಮಲ್ಲಿಕಾರ್ಜುನ ಕೆಂಗನಾಳ, ಕಾಂತಪ್ಪ ಇಂಚಗೇರಿ, ಶ್ರೀಮಂತ ಬಾರಿಕಾಯಿ, ದುರ್ಗಪ್ಪ ಸಿದ್ಧಾಪೂರ.

ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next