Advertisement

Vijayapura; ಸರ್ಕಾರಿ ಕಾರು ದುರ್ಬಳಕೆ; ನೌಕರನಿಂದಲೇ ಮೇಲಾಧಿಕಾರಿ ವಿರುದ್ದ ಪೊಲೀಸರಿಗೆ ದೂರು

03:50 PM Feb 12, 2024 | Team Udayavani |

ವಿಜಯಪುರ: ಬಿಎಸ್ಎನ್ಎಲ್ ಜನರಲ್ ಮ್ಯಾನೇಜರ್ ನಿಗಮಕ್ಕೆ ಟೆಂಡರ್ ಮೂಲಕ ನೀಡಿರುವ ವಾಹನದ ಬದಲಾಗಿ ಖಾಸಗಿ ವಾಹನ ಬಳಸಿದ್ದು, ಇಲಾಖೆಯ ನೌಕರನೇ ತನ್ನ ಮೇಲಾಧಿಕಾರಿ ವಿರುದ್ಧ ನೀಡಿದ ದೂರು ಆಧರಿಸಿ ಪೊಲೀಸರು ಕಾರು ಜಪ್ತಿ ಮಾಡಿದ್ದಾರೆ.

Advertisement

ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜನರಲ್ ಮ್ಯಾನೇಜರ್ ವಿಕಾಸ ಜೈಕರ ಅವರು ಬಿಎಸ್ಎನ್ಎಲ್ ನಿಗಮಕ್ಕೆ ಟೆಂಡರ್ ಮೂಲಕ ಅಧಿಕೃತವಾಗಿ ನೀಡಿರುವ ಕಾರನ್ನು ಬಳಸದೆ ಖಾಸಗಿ ಕಾರು ಬಳಸಿ, ನಿಗಮಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಅದೇ ಕಛೇರಿಯ ಸಿಬ್ಬಂದಿ 122 ಸಂಖ್ಯೆ ಕರೆ ಮಾಡಿ ದೂರು ನೀಡಿದ್ದಾರೆ. ಇದನ್ನು ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಧಿಕಾರಿಯ ಖಾಸಗಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಬಿಎಸ್ಎನ್ಎಲ್ ಜನರಲ್ ಮ್ಯಾನೇಜರ್ ಅವರಿಗೆ ಟೆಂಡರ್ ಮೂಲಕ ಕೆಎ22-ಸಿ8059 ಸಂಖ್ಯೆಯ ಹಳದಿ ಬೋರ್ಡ್ ಕಾರು ನೀಡಿದೆ. ಆದರೆ ಜೈಕರ ಅವರು ಟೆಂಡರ್ ಸಂಸ್ಥೆಯೊಂದಿಗೆ ಸೇರಿ ಐಷಾರಾಮಿ ಕಾರು ಪಡೆದು, ನಿಯಮ ಬಾಹಿರವಾಗಿ ಎಲ್ಲೆಂದರಲ್ಲಿ ಪತ್ನಿ ಸಮೇತ ಪ್ರಯಾಣಿಸುತ್ತಾರೆ. ಹೀಗೆ ಖಾಸಗಿಯಾಗಿ ಪಯಣಿಸಿದ ಮೊತ್ತವನ್ನು ವಾಹನ ಟೆಂಡರದಾರ ಸಂಸ್ಥೆಯೊಂದಿಗೆ ಸೇರಿ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ ಎಂದು ದೂರಿದ್ದಾರೆ.

ಬಿಎಸ್ಎನ್ಎಲ್ ನಿಗಮಕ್ಕೆ ವಾಹನ ಟೆಂಡರ್ ನೀಡದ ಸಂಸ್ಥೆಯ ಕೆಎ22-ಎಂಬಿ0494 ಸಂಖ್ಯೆಯ ಕಾರನ್ನು ಬಳಸುತ್ತಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ವಸತಿಗಾಗಿ ನಿಗಮದಿಂದ ಹವಾನಿಯಂತ್ರಿತ ಅತಿಥಿ ಗೃಹ ಇದ್ದರೂ ದುಬಾರಿ ವೆಚ್ಚದ ಐಷಾರಾಮಿ ಅತಿಥಿಗೃಹ ಬಳಕೆ ಮಾಡುತ್ತಾರೆ. ನಿಗಮದ ಹಣದಲ್ಲಿ ಜೈಕರ ಕುಟುಂಬದ ಸದಸ್ಯರನ್ನೂ ಪ್ರವಾಸಕ್ಕೆ ಕರೆ ತಂದು ಮೋಜು ಮಾಡುತ್ತಿದ್ದಾರೆ ಎಂದು ಮೇಲಾಧಿಕಾರಿ ವಿರುದ್ಧ ಕೆಳಹಂತದ ಸಿಬ್ಬಂದಿ ಸುರೇಶ ಬಿರಾದಾರ ದೂರಿದ್ದಾರೆ.

ಪ್ರತಿ ಬಾರಿ ಬೆಳಗಾವಿಯಿಂದ ವಿಜಯಪುರ ಜಿಲ್ಲೆಗೆ ಬರುವಾಗ ಜೈಕರ ಪತ್ನಿ ಸಮೇತ ಖಾಸಗಿ ಕಾರನ್ನೇ ಬಳಸುತ್ತಾರೆ ಎಂದು ಬಿಎಸ್ಎನ್ಎಲ್ ಸೀನಿಯರ್ ಆಫೀಸ್ ಅಸೋಸಿಯೇಟ್ ಸುರೇಶ ಬಿರಾದಾರ 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದರು.

Advertisement

ಸೋಮವಾರ ಖಾಸಗಿ ಕಾರಿನಲ್ಲಿ ಜೈಕರ್ ಖಾಸಗಿ ಕಾರಿನಲ್ಲೇ ಬೆಳಗಾವಿಯಿಂದ ವಿಜಯಪುರ ನಗರಕ್ಕೆ ಬಂದಾಗ ಅದೇ ಕಛೇರಿ ಸಿಬ್ಬಂದಿ ಸುರೇಶ ಬಿರಾದಾರ ಮೇಲಾಧಿಕಾರಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ನಗರದ ಗಾಂಧಿಚೌಕ್ ಠಾಣೆಯ 112 ಪೊಲೀಸರು, ಜೈಕರ್ ಬಳಸುತ್ತಿದ್ದ ಖಾಸಗಿ ಕಾರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.

ಸದರಿ ಅಕ್ರಮದ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಬೇಕು, ನಿಗಮಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದರಿಂದ ಸೇವೆಯಿಂದ ಅಮಾನತು ಮಾಡಬೇಕು. ನಿಗಮಕ್ಕೆ ನಿಯಮ ಬಾಹಿರ ಹಾಗೂ ಕಾನೂನು ಬಾಹೀರವಾಗಿ ಅಧಿಕಾರ, ಹಣ ದುರ್ಬಳಕೆ ಆರೋಪದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸುರೇಶ ಬಿರಾದಾರ ತಮ್ಮದೇ ಮೇಲಾಧಿಕಾರಿ ವಿರುದ್ಧ ಪೊಲೀಸರಿಗೆ ಹಾಗೂ ನಿಗಮದ ಉನ್ನತ ಮಟ್ಟದ ಅಧಿಕಾರಿಗಳಿಗೆ ಲಿಖಿತ ದೂರು ನೀಡುವುದಾಗಿ ಮಾಧ್ಯಮಗಳಿಗೆ ತಿಳಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next