ವಿಜಯಪುರ: ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಯಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ವಿನಾಯ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟದ ನೇತೃತ್ವದಲ್ಲಿ ಆಕಳುಗಳ ಸಮೇತ ರೈತರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ವಿಜಯಪುರ- ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸಂಭಾಜಿ ಮಿಸಾಳೆ ಮಾತನಾಡಿ, ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಯಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ವಿನಾಯ್ತಿ ನೀಡದೇ ಹೋದರೆ ನಮ್ಮ ದೇಶದ ರೈತರಿಗೆ ದೊಡ್ಡ ಆಪತ್ತು ಎದುರಾಗುತ್ತದೆ. ಮುಕ್ತ ವ್ಯಾಪಾರ ಒಪ್ಪಂದದಡಿ ಡೈರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.
ಸರ್ಕಾರದ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ ಸ್ಥಳೀಯ ಹಾಲು ಉತ್ಪಾದಕ ವರ್ಗಕ್ಕೆ ಹಾಗೂ ದೇಶದ ಡೈರಿ ವ್ಯವಸ್ಥೆಗೆ ಬಹುದೊಡ್ಡ ಹೊಡೆತ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಭಾರತದಲ್ಲಿ ಹೈನುಗಾರಿಕೆ ಬಹುದೊಡ್ಡ ವ್ಯವಸ್ಥೆಯಾಗಿದ್ದು, ಅನೇಕರು ಈ ಉದ್ಯಮ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮುಕ್ತ ವ್ಯಾಪಾರದಡಿ ಕಡಿಮೆ ದರದಲ್ಲಿ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವ ಸಾಧ್ಯತೆ ಇದೆ. ಹೀಗಾಗಿ ದೇಶಿಯ ಉತ್ಪನ್ನಗಳ ಬೇಡಿಕೆ ಕುಸಿಯುತ್ತಿದೆ. ಮುಖ್ಯವಾಗಿ ಪ್ರಾರಂಭದಲ್ಲಿ ವಿದೇಶಿ ಕಂಪನಿಗಳು ಕಡಿಮೆ ದರದಲ್ಲಿ ಹಾಲಿನ ಉತ್ಪನ್ನಗಳನ್ನು ಒದಗಿಸಿ, ಕಾಲಕ್ರಮೇಣ ದೇಶಿಯ ಉತ್ಪನ್ನಗಳನ್ನು ನಶಿಸಿ ಹೋಗುವ ಸಾಧ್ಯತೆ ಇದೆ. ಆಗ ವಿದೇಶಿ ಆಮದಿನ ಮೇಲೆ ಹೆಚ್ಚಿನ ಅವಲಂಬನೆಯಾಗುತ್ತದೆ. ಒಂದೆಡೆ ದರ ಹೆಚ್ಚಳದಿಂದ ಗ್ರಾಹಕರು ಹಾಗೂ ಉದ್ಯೋಗ ಕಳೆದುಕೊಂಡಿದ್ದರಿಂದಾಗಿ ರೈತರು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ವಿದೇಶಿ ಕಂಪನಿಗಳು ದರವನ್ನು ಹೆಚ್ಚಿಗೆ ಮಾಡುತ್ತವೆ ಎಂದು ವಿದೇಶಿ ಹಾಲು ಉತ್ಪನ್ನಗಳ ಪ್ರವೇಶದಿಂದಾಗುವ ಅಪಾಯಗಳನ್ನು ವಿವರಿಸಿದರು.
ಮೇಕ್ ಇನ್ ಇಂಡಿಯಾ ಸಾರ್ಥಕವಾದರೆ ಮೊದಲು ದೇಶಿಯ ಹಾಲು ಉತ್ಪಾದನಾ ವ್ಯವಸ್ಥೆ ರಕ್ಷಣೆಯಾಗಬೇಕಿದೆ. ಮುಕ್ತ ಒಪ್ಪಂದಕ್ಕೆ ಅವಕಾಶ ನೀಡಿದಲ್ಲಿ ಹೈನುಗಾರರ ಆದಾಯ ಅರ್ಧಕ್ಕಿಳಿಯುವ ಅಪಾಯವಿದ್ದು, ಈ ವ್ಯವಸ್ಥೆ ಜಾರಿಗೊಂಡರೆ ಭಾರತೀಯ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯ ಸಾಧ್ಯವೇ ಆಗುವುದಿಲ್ಲ ಎಂದರು.
ಕೂಡಲೇ ಹಾಲು ಉತ್ಪನ್ನಗಳಿಗೆ ಮುಕ್ತ ವ್ಯಾಪಾರದಡಿ ವಿನಾಯ್ತಿ ನೀಡಿ ಹೈನುಗಾರರ ಸ್ವಾವಲಂಬನೆ, ಉದ್ಯೋಗ ಭದ್ರತೆಗೆ ಆದ್ಯತೆ ಮಾಡಲು ಒತ್ತಾಯಿಸಿದರು. ಕೆಂಎಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ನಿಡೋಣಿ, ಎಸ್.ಜೆ. ಹಂಡಿ, ಜಿ.ಎಸ್.ಚಲವಾದಿ, ಎಸ್.ಎ. ಕರಪಟ್ಟಿ, ಜಿ.ಎಂ. ಆದಬಸಪ್ಪಗೋಳ, ಎ.ಕೆ. ಹಳ್ಳೂರ, ಐ.ಎಸ್. ಕರಿಗೌಡರ, ಎಂ.ಆರ್. ಹನಗಂಡಿ, ಎಸ್.ಎಲ್. ತಳೇವಾಡ ಸೇರಿದಂತೆ ಅವಳಿ ಜಿಲ್ಲೆಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.