Advertisement

ಮಾಸ್ಟರ್‌ಪ್ಲ್ರಾನ್‌ ಸಂತ್ರಸ್ತರಿಗೆ ಸೂಕ್ತ ಪರಿಹಾರ

11:17 AM Aug 26, 2019 | Naveen |

ವಿಜಯಪುರ: ನಗರದಲ್ಲಿ ಮಾಸ್ಟರ್‌ಪ್ಲ್ರಾನ್‌ ಕಾಮಗಾರಿಯಲ್ಲಿ ಮನೆ, ನಿವೇಶನ, ಅಂಗಡಿ ಹಾಗೂ ಬಯಲು ಸ್ಥಳ ಕಳೆದುಕೊಳ್ಳುವ ಪ್ರತಿಯೊಬ್ಬ ಸಂತ್ರಸ್ತರಿಗೂ ಸರ್ಕಾರ ನಿಗದಿ ಮಾಡಿರುವ ಪರಿಹಾರ ವಿತರಿಸುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.

Advertisement

ನಗರದ ವಾರ್ಡ್‌ ನಂ. 8 ರಾಮಪ್ರಸಾದ ಗಲ್ಲಿಯ ಮರಗಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಿಜಯಪುರ ನಗರದ ಶಿವಾಜಿ ಮಹಾರಾಜರ ವೃತ್ತದಿಂದ ಅಥಣಿ ರಿಂಗ್‌ ರಸ್ತೆವರೆಗೆ ಮಾಸ್ಟರ್‌ಪ್ಲ್ಯಾನ್‌ ಕಾಮಗಾರಿಗೆ ಈಗಾಗಲೇ ಸರ್ಕಾರ ಅನುಮೋದನೆ ನೀಡುವುದರ ಜೊತೆಗೆ ಅನುದಾನವನ್ನೂ ಒದಗಿಸಿದೆ. ಅಥಣಿ ರಿಂಗ್‌ ರಸ್ತೆಯಿಂದ ಸಿಂದಗಿ ನಾಕಾವರೆಗೆ ಮಾಸ್ಟ್‌ರ್‌ಪ್ಲ್ಯಾನ್‌ ಮಾಡಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ ಎಂದರು.

ಶೀಘ್ರವೇ ನಗರದಲ್ಲಿ ನಿರ್ಮಿಸುತ್ತಿರುವ ಆಶ್ರಯ ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಹಂಚಿಕೆ ಮಾಡಲಾಗುತ್ತದೆ. ಅಟಲ್ ಬಿಹಾರಿ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 1.80 ಲಕ್ಷ ರೂ.ನಲ್ಲಿ ಮನೆ ಹಂಚಿಕೆ ಮಾಡಲಾಗುತ್ತಿದೆ. ಸ್ವಂತ ನಿವೇಶನ ಹೊಂದಿದವರಿಗೆ ಕಟ್ಟಡ ನಿರ್ಮಿಸಲು ಹಣಕಾಸಿನ ನೆರವು ನೀಡುವ ಯೋಜನೆ ಸಹ ಚಾಲ್ತಿಯಲ್ಲಿದೆ. ಈಗಾಗಲೇ ಈ ಯೋಜನೆಯನ್ನು ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ತಲುಪಿಸುವ ಉದ್ದೇಶದಿಂದ ಕಚೇರಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಸಾರ್ವಜನಿಕರು ಕಚೇರಿಗೆ ಭೇಟಿ ನೀಡಿ ಅವಶ್ಯಕ ದಾಖಲೆ ಹಾಗೂ ಯೋಜನೆಯ ಸಮಗ್ರ ಮಾಹಿತಿ ಪಡೆಯಬೇಕು. ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಲು ಹಾಗೂ ಸೌಲಭ್ಯಗಳನ್ನು ತಲುಪಿಸಲು ನಗರ ಶಾಸಕರ ಕಾರ್ಯಾಲಯ ಸದಾ ಸೇವೆಗೆ ಸಿದ್ಧವಾಗಿದೆ ಎಂದರು.

ಇನ್ನೂ ರಾಮಪ್ರಸಾದ ಗಲ್ಲಿ ಸೇರಿದಂತೆ ಎಲ್ಲ ಬಡಾವಣೆಗಳ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು ನಗರದ ಸರ್ವತೋಮುಖ ಪ್ರಗತಿಯೇ ಆದ್ಯ ಗುರಿ ಎಂದರು. ಇದಲ್ಲದೇ ನಗರದ ಕಲಾಲ್ ಗಲ್ಲಿಯ ಸೂರ್ಯವಂಶಿಯ ಕ್ಷತ್ರಿಯ ಕಲಾಲ್ ಸಮಾಜದ ಅಂಬಾಭವಾನಿ ದೇವಾಲಯದಲ್ಲಿ ಶಾಸಕರ ನಿಧಿಯಲ್ಲಿ 5 ಲಕ್ಷ ರೂ. ಮೌಲ್ಯದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

Advertisement

ಮುಖಂಡರಾದ ಪರಶುರಾಮ ರಜಪೂತ, ಉಮೇಶ ವಂದಾಲ, ವಿಜಯಕುಮಾರ ಚವ್ಹಾಣ, ಘನಶ್ಯಾಮ್‌ ಪಾಂಡೆ, ಕಲಾಲ್ ಸಮಾಜದ ಅಧ್ಯಕ್ಷರಾದ ನಗರಸಭೆ ಮಾಜಿ ಅಧ್ಯಕ್ಷ ಗಜಾನನ ಚೌಧರಿ, ಶಿವು ಗುಡ್ಯಾಳ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next