Advertisement

ಕಾಲುವೆ ನಿರ್ಮಾಣಕ್ಕೂ ಬಂತು ಮ್ಯಾನ್‌ಲಿಫ್ಟರ್‌

01:32 PM Jun 15, 2019 | Naveen |

ಜಿ.ಎಸ್‌. ಕಮತರ
ವಿಜಯಪುರ:
ಮಹಾನಗರಗಳ ಕೈಗಾರಿಕೆಗಳು, ಗಗನಚುಂಬಿ ಕಟ್ಟಡಗಳು, ಮೆಟ್ರೋ ನಿರ್ಮಾಣದಂಥ ಯೋಜನೆಗಳ ಕಾಮಗಾರಿ ನಿರ್ಮಾಣದಲ್ಲಿ ಕಂಡು ಬರುತ್ತಿದ್ದ ಮ್ಯಾನ್‌ ಲಿಫ್ಟರ್‌ ಯಂತ್ರ ಇದೀಗ ವಿಜಯಪುರಕ್ಕೂ ಬಂದಿದೆ. ದೇಶದಲ್ಲೇ ಅತಿ ಉದ್ದ ಹಾಗೂ ಎತ್ತರದ ಜಲಸೇತುವೆ ಎಂಬ ಹಿರಿಮೆಗೆ ಪಾತ್ರವಾಗಲಿರುವ ತಿಡಗುಂದಿ ನಾಲೆ ನಿರ್ಮಾಣ ಕೆಲಸದಲ್ಲಿ ಮ್ಯಾನ್‌ ಲಿಫ್ಟರ್‌ ಯಂತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ಸದರಿ ಯಂತ್ರ ನೀರಾವರಿ ಯೋಜನೆ ಮೂಲಕ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಳಸಿಕೊಂಡಿರುವುದು ಕೂಡ ದಾಖಲೆ ಎನಿಸಿದೆ.

Advertisement

ಮ್ಯಾನ್‌ಲಿಫ್ಟರ್‌ ಯಂತ್ರ ಎತ್ತರದ ಪ್ರದೇಶದಲ್ಲಿ ನಡೆಯುವ ಕಾಮಗಾರಿ ಸ್ಥಳಕ್ಕೆ ಕಾರ್ಮಿಕರನ್ನು ಕರೆದೊಯ್ಯುವ ಹಾಗೂ ಕೆಳಗೆ ಇಳಿಸಲು ಬಳಕೆಯಾಗುವ ಆಧುನಿಕ ಯಂತ್ರ. ಕೈಗಾರಿಕೆಗಳು, ಮೆಟ್ರೋ ಹಾಗೂ ಗಗನಚುಂಬಿ ಬಹುಮಹಡಿ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಮ್ಯಾನ್‌ಲಿಫ್ಟರ್‌ ಎಂಬ ಯಂತ್ರದ ಬಳಕೆ ಇದೀಗ ಸಾಮಾನ್ಯವಾಗಿದೆ. ಕಾರ್ಮಿಕರು ಎತ್ತರದ ಪ್ರದೇಶದಲ್ಲಿ ಕೆಲಸ ಮಾಡುವಾಗ ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ತುರ್ತು ನೆರವಿಗೆ ಧಾವಿಸುವಲ್ಲಿ ಮ್ಯಾನ್‌ ಲಿಫ್ಟರ್‌ ಬಳಕೆ ಅತ್ಯಂತ ಸಹಕಾರಿ. ಸುರಕ್ಷತಾ ಬೆಲ್ಟ್ ಹಾಗೂ ಹೆಲ್ಮೆಟ್ ಹಾಕಿಯೇ ಈ ವಿಶಿಷ್ಟ ಲಿಫ್ಟ್ನಲ್ಲಿ ಕಾರ್ಮಿಕರನ್ನು ಸಾಗಿಸಲಾಗುತ್ತದೆ.

ಸದರಿ ಯಂತ್ರ ಇಬ್ಬರು ಚಾಲಕರ ನಿಯಂತ್ರಣದಲ್ಲಿ ಇರುತ್ತದೆ. ಲಿಫ್ಟ್ನಲ್ಲಿ ಓರ್ವ ನಿಯಂತ್ರಕ ಇದ್ದು, ಲಿಫ್ಟ್ ಸೇರಬೇಕಾದ ಸ್ಥಳದತ್ತ ತಿರುಗಿಸುವ ಕೆಲಸ ಮಾಡುತ್ತಾನೆ. ಇನ್ನು ಕೆಳಗಡೆ ಎಂಜಿನ್‌ ಬಳಿ ಓರ್ವ ಚಾಲಕ ಇದ್ದು, ಲಿಫ್ಟ್ ನ್ನು ಮೇಲಕ್ಕೆ ಏರಿಸುವ ಹಾಗೂ ಕೆಳಕ್ಕೆ ಇಳಿಸುವಲ್ಲಿ ಈತ ಲಿಫ್ಟ್ ನಿಯಂತ್ರಿಸುವ ಕೆಲಸ ಮಾಡುತ್ತಾನೆ.

ಇಂಥ ವಿಶಿಷ್ಟತೆ ಹೊಂದಿರುವ ಯಂತ್ರ ಮಹಾನಗರಗಳಲ್ಲಿ ಮಾತ್ರ ಕಂಡು ಬರುತ್ತಿದ್ದು, ಇದೀಗ ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಮೊದಲ ಬಾರಿಗೆ ಬಳಕೆಯಾಗುತ್ತಿದೆ. ಜಿಲ್ಲೆಯ ಮುಳವಾಡ ಏತ ನೀರಾವರಿ ಯೋಜನೆಯ ತಿಡಗುಂದಿ ವಿಸ್ತರಣಾ ನಾಲೆ ಕಾಮಗಾರಿ ನಡೆಯುತ್ತಿದೆ. ಸದರಿ ಯೋಜನೆ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಸುಮಾರು 12.5 ಕಿಮೀ ಉದ್ದದವರೆಗಿನ ಜಲ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಭಾರತದ ನೀರಾವರಿ ಯೋಜನೆಯಲ್ಲೇ ಅತಿ ದೊಡ್ಡದೆಂದು ಹೇಳಲಾಗುವ ಈ ಜಲ ಮೇಲ್ಸೇತುವೆಯನ್ನು ಬೃಹತ್‌ ಗಾತ್ರದ 407 ಕಂಬಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಸದರಿ ಕಂಬಗಳಲ್ಲಿ ಕೆಲವು 10ರಿಂದ 100 ಅಡಿವರೆಗೆ ಬೇರೆ ಪ್ರಮಾಣದ ಎತ್ತರದಲ್ಲಿವೆ. ಈ ಕಂಬಗಳ ಮೇಲೆ ಜಲ ಮೇಲ್ಸೇತುವೆ ನಿರ್ಮಿಸುವ ಕೆಲಸಕ್ಕೆ ಮ್ಯಾನ್‌ಲಿಫ್ಟರ್‌ ಬಳಸುತ್ತಿರುವ ಕಾರಣ ಕಾಮಗಾರಿ ವೇಗದಿಂದ ನಡೆಸಲು ನೆರವಾಗಿದೆ.

ತಿಡಗುಂದಿ ವಿಸ್ತರಣಾ ನಾಲೆಯ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಶಂಕರನಾರಾಯಣ ಕನಸ್ಟ್ರಕ್ಷನ್‌ ಕಂಪನಿ (ಎಸ್‌ಎನ್‌ಸಿ) ಮ್ಯಾನ್‌ ಲಿಫ್ಟರ್‌ ಯಂತ್ರವನ್ನು ಮೊದಲ ಬಾರಿಗೆ ನೀರಾವರಿ ಯೋಜನೆಯಲ್ಲಿ ಬಳಸಿದೆ. ಮುಂಬೈ ಮೂಲದ ಶಕ್ತಿ ಇಕ್ವಿಪಮೆಂಟ್ ಸಂಸ್ಥೆಯಿಂದ ಎಸ್‌ಎನ್‌ಸಿ ಸಂಸ್ಥೆ ಮಾಸಿಕ 2.50 ಲಕ್ಷ ರೂ. ಬಾಡಿಗೆ ಅಧಾರದಲ್ಲಿ ಈ ಯಂತ್ರವನ್ನು ಪಡೆದಿದೆ. ನಿತ್ಯವೂ ಕನಿಷ್ಟ 10 ಗಂಟೆ ಕಾಲ ಈ ಯಂತ್ರವನ್ನು ಕಾಮಗಾರಿಯಲ್ಲಿ ಬಳಕೆ ಮಾಡುತ್ತಿದ್ದು, ಕಾಮಗಾರಿ ಪೂರ್ಣಗೊಳಿಸುವ ಸಮಯ ಉಳಿಕೆಯಲ್ಲಿ ಅತ್ಯಂತ ಪ್ರಯೋಜಕಾರಿ ಎನಿಸಿದೆ.

Advertisement

ಎತ್ತರದ ಪ್ರದೇಶದಲ್ಲಿ ಅಪಾಯಕಾರಿ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ ರಕ್ಷಣೆ ಮಾಡುವಲ್ಲಿ ಮ್ಯಾನ್‌ ಲಿಫ್ಟರ್‌ ಅತ್ಯಂತ ಪ್ರಯೋಜನಕಾರಿ ಎನಿಸಿದೆ. ತಿಡಗುಂದಿ ನೀರಾವರಿ ವಿಸ್ತರಣೆಯ ಜಲ ಮೇಲ್ಸೇತುವೆ ನೂರಾರು ಅಡಿ ಎತ್ತರದಲ್ಲಿ ನಿರ್ಮಾಣ ಮಾಡುತ್ತಿರುವ ಕಾರಣ ಈ ಯಂತ್ರದ ಬಳಕೆ ಅತ್ಯಂತ ಸಹಕಾರಿ ಆಗಿದೆ.
ಪ್ರಭಾಕರ, ಫೋರಮನ್‌,
ಸಿವಿಲ್ ವರ್ಕ್‌ ವಿಭಾಗ, ಎಸ್‌ಎನ್‌ಸಿ ಸಂಸ್ಥೆ 

ಮುಂಬೈನ ಖಾಸಗಿ ಕಂಪನಿಯಿಂದ ಇದನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಪಡೆದಿದ್ದು, ಕಳೆದ ಒಂದು ವರ್ಷದಿಂದ ಬಳಸಲಾಗುತ್ತಿದೆ. ಕರ್ನಾಟಕದಲ್ಲಿ ಮೆಟ್ರೋ ಕಾಮಗಾರಿಯಲ್ಲಿ ಮ್ಯಾನ್‌ ಲಿಫ್ಟರ್‌ ಬಳಕೆಯಾಗುತ್ತದೆ. ಇದೇ ಮೊದಲ ಬಾರಿಗೆ ನೀರಾವರಿ ಯೋಜನೆಯಲ್ಲಿ ನಮ್ಮ ಸಂಸ್ಥೆ ಈ ವಿಶಿಷ್ಟ ಯಂತ್ರವನ್ನು ಬಳಕೆ ಮಾಡಿಕೊಂಡಿದೆ. •ಬಸವರಾಜ ಬಾರಕೇರ,
ವ್ಯವಸ್ಥಾಪಕರು, ಪ್ಲಾಂಟ್ ಮಸೀನ್‌ ವಿಭಾಗ, ಎಸ್‌.ಎನ್‌.ಸಿ. ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next