Advertisement

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

11:11 AM May 08, 2024 | Team Udayavani |

ಬೆಂಗಳೂರು: ಸಾಲ ತೀರಿಸಲು ನಕಲಿ ಕೀ ಬಳಸಿ ಸ್ವಂತ ಅಕ್ಕನ ಮನೆಯಲ್ಲಿ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಸಹೋದರಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಲಗ್ಗೆರೆ ನಿವಾಸಿ ಉಮಾ (22) ಬಂಧಿತೆ. ಈಕೆಯ ಮನೆಯಲ್ಲಿದ್ದ 5 ಲಕ್ಷ ರೂ. ನಗದು ಮತ್ತು 30 ಚಿನ್ನದ ನಾಣ್ಯಗಳನ್ನು ಹಾಗೂ ಆಕೆ ಕೆಲಸ ಮಾಡುವ ಆಟೋ ಕನ್ಸೆಲ್‌ಟೆಂಟ್‌ ಮಾಲೀಕರಿಗೆ ನೀಡಿದ್ದ 16 ಚಿನ್ನದ ನಾಣ್ಯ ಗಳನ್ನು ಮತ್ತು 46.90 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಒಟ್ಟಾರೆ ಯಾಗಿ 46 ಚಿನ್ನದ ನಾಣ್ಯಗಳು ಹಾಗೂ 51.90 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಾಗದೇವನಹಳ್ಳಿಯ ಆರ್‌.ಆರ್‌ ಲೇಔಟ್‌ ನಿವಾಸಿ ದೂರದಾರ ಕುನ್ನೇಗೌಡ ಸಿಮೆಂಟ್‌ ಹಾಗೂ ಕಬ್ಬಿಣದ ವ್ಯಾಪಾರ ಮಾಡಿಕೊಂಡಿದ್ದು, ಅವರ ದೊಡ್ಡಪ್ಪನ ಮಗ ಈ ವ್ಯಾಪಾರದಲ್ಲಿ ಪಾಲುದಾರನಾಗಿದ್ದಾರೆ. ಏ. 22 ರಂದು ಕುನ್ನೇಗೌಡ ಕುಟುಂಬ ಸಮೇತ ಸ್ವಂತ ಊರಿನಲ್ಲಿ ನಡೆಯುವ ಶ್ರೀಚೌಡೇಶ್ವರಿ ಜಾತ್ರೆಗೆ ಹೋಗಿದ್ದರು. ಹೀಗಾಗಿ ಅವರ ದೊಡ್ಡಪ್ಪನ ಪುತ್ರ ಮಂಚೇಗೌಡನಿಗೆ ಮನೆ ಕೀ ಕೊಟ್ಟು ರಾತ್ರಿ ಮಲಗಲು ತಿಳಿಸಿದ್ದರು. ಏ.22ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಮಂಚೇಗೌಡ, ಏ.23ರಂದು ಮುಂಜಾನೆ ತಾನೂ ಜಾತ್ರೆಗೆ ತೆರಳಿದ್ದರು. ಏ.24ರಂದು ರಾತ್ರಿ ಸುಮಾರು 10.30ರ ಸಮಾರಿಗೆ ವಾಪಸ್‌ ಬಂದು ಮನೆಯಲ್ಲಿ ಮಲಗಲು ಹೋದಾಗ, ಮನೆಯ ಬಿರುವಿನ ಬಾಗಿಲುಗಳು ತೆರೆದಿರುವುದು ಹಾಗೂ ಕೊಠಡಿಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿತ್ತು. ಅನುಮಾನಗೊಂಡು ಕೂಡಲೇ ಸಹೋದರ ಕುನ್ನೇಗೌಡಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಗಾಬರಿಗೊಂಡ ಕುನ್ನೇಗೌಡ ಅದೇ ದಿನ ತಡರಾತ್ರಿಯೇ ವಾಪಸ್‌ ಬಂದು ನೋಡಿದಾಗ ಮನೆಯಲ್ಲಿದ್ದ 52 ಲಕ್ಷ ರೂ. ನಗದು ಮತ್ತು 182 ಗ್ರಾಂ ಚಿನ್ನದ ನಾಣ್ಯಗಳು ಸೇರಿ ಒಟ್ಟು 65 ಲಕ್ಷ ರೂ.ಮೌಲ್ಯದ ವಸ್ತುಗಳು ಕಳುವಾಗಿರುವುದು ಪತ್ತೆಯಾಗಿತ್ತು. ಈ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಸಂಬಂಧಿಕರು ಅಥವಾ ಪರಿಚಯಸ್ಥರೇ ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿದೆ.

ಹೀಗಾಗಿ ಎಲ್ಲಾ ಸಂಬಂಧಿಕರ ವಿಚಾರಣೆ ನಡೆಸುವ ವೇಳೆ ಆರೋಪಿ ಉಮಾ ಬಗ್ಗೆ ಅನುಮಾನಗೊಂಡು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕಳ್ಳತನ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಆಯುಕ್ತರು ಹೇಳಿದರು.

Advertisement

ಸಿಸಿ ಕ್ಯಾಮೆರಾ, ಬಾತ್ಮೀದಾರರ ಮಾಹಿತಿ ಆಧರಿಸಿ ಸೆರೆ: ಆರೋಪಿ ಉಮಾಗೆ, ತನ್ನ ಸಹೋದರಿ ಮನೆಯಲ್ಲಿ ನಗದು, ಚಿನ್ನಾಭರಣ ಇರುವ ವಿಚಾರ ಗೊತ್ತಾಗಿತ್ತು. ಇತ್ತೀಚೆಗೆ ಮನೆಗೆ ಬಂದಾಗ ಯಾರಿಗೂ ಗೊತ್ತಾಗದಂತೆ ಮನೆ ಕೀಯನ್ನು ಕೊಂಡೊಯ್ದು ನಕಲಿ ಕೀ ಮಾಡಿಸಿಕೊಂಡಿದ್ದಳು. ಏ.22 ರಂದು ಸಹೋದರಿ ಕುಟುಂಬ ಸಮೇತ ಜಾತ್ರೆ ಹೋಗಿರುವುದನ್ನು ಖಚಿತ ಪಡಿಸಿಕೊಂಡ ಆರೋಪಿ, ವಾಪಸ್‌ ಬರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಳು. ಈ ಮಧ್ಯೆ ಈಕೆಯೂ ಏ.23ರಂದು ಜಾತ್ರೆಗೆ ಹೋಗಿ, ಅದೇ ದಿನ ರಾತ್ರಿ ವಾಪಸ್‌ ಬೆಂಗಳೂರಿಗೆ ಬಂದು, ನಕಲಿ ಕೀ ಬಳಸಿ ಸಹೋದರಿ ಮನೆಯೊಳಗೆ ಹೋಗಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು. ತನಿಖೆ ವೇಳೆ ಆರೋಪಿ ದೂರುದಾರ ಮನೆ ಸಮೀಪದ ಸಿಸಿ ಕ್ಯಾಮೆರಾದಲ್ಲಿ ರಾತ್ರಿ ಓಡಾಟ ನಡೆಸಿರುವ ದೃಶ್ಯಗಳು ಸೆರೆಯಾಗಿತ್ತು. ಮತ್ತೂಂದೆಡೆ ಕೃತ್ಯ ನಡೆದ ದಿನ ಆರೋಪಿ ಲಗ್ಗೆರೆಯ ತನ್ನ ಮನೆಯಲ್ಲಿ ಇರಲಿಲ್ಲ ಎಂಬುದು ಬಾತ್ಮೀದಾರರಿಂದ ಖಚಿತ ಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದರು.

ಲಕ್ಷಾಂತರ ರೂ. ಸಾಲ ತೀರಿಸಿದ್ದ  ಆರೋಪಿ : ಪಿಯುಸಿ ವ್ಯಾಸಂಗ ಮಾಡಿರುವ ಉಮಾ, ಸ್ವಲ್ಪ ಶೋಕಿ ಜೀವನಕ್ಕೆ ಮಾರು ಹೋಗಿದ್ದಳು. ಅದಕ್ಕಾಗಿ ಹೆಚ್ಚು ಹಣ ವ್ಯಯಿಸುತ್ತಿದ್ದಳು. ಆದರಿಂದ 3-4 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಸಹೋದರಿ ಮನೆಯಲ್ಲಿ ಕಳವು ಮಾಡಲು ಯೋಚಿಸಿದ್ದಳು. ಇನ್ನು ಕದ್ದ ಹಣದ ಪೈಕಿ ಸಾಲ ತೀರಿಸಿದ್ದು, 5 ಲಕ್ಷ ರೂ. ಅನ್ನು ಮನೆಯಲ್ಲಿ ಇಟ್ಟಿದ್ದಳು. ಬಾಕಿ ಹಣ ಮತ್ತು ನಗದನ್ನು ತಾನು ಕೆಲಸ ಮಾಡುವ ಆಟೋ ಕನ್ಸೆಲ್‌ಟೆಂಟ್‌ ಮಾಲೀಕರಿಗೆ, ಸಹೋದರಿ ಮನೆಯಲ್ಲಿ ಯಾರು ಇಲ್ಲ. ಹೀಗಾಗಿ ಇಟ್ಟುಕೊಳ್ಳಿ ಎಂದು ಸುಳ್ಳು ಹೇಳಿ ಇರಿಸಿದ್ದಳು ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next