ವಿಜಯಪುರ: ಕೋವಿಡ್ ಮೂರನೇ ಅಲೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೊಂದಿಕೊಂಡಿರುವ ನೆರೆ ರಾಜ್ಯ ಮಹಾರಾಷ್ಟ್ರದ ಗಡಿಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್ ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಹೀಗಾಗಿ ಮಹಾರಾಷ್ಟ್ರದ ಗಡಿ ಭಾಗದ ಪ್ರದೇಶದಲ್ಲಿರುವ ತಿಕೋಟಾ ತಾಲೂಕಿನ ವಿವಿಧ ಚೆಕ್‌ಪೋಸ್ಟ್ ಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಭೇಟಿ ನೀಡಿ ಪರಿಶೀಲಿಸಿದರು.
ತಿಕೋಟಾ ತಾಲೂಕು ವ್ಯಾಪ್ತಿಯ ಕನಮಡಿ, ಅಳಗಿನಾಳ, ಸಿದ್ದಾಪುರ (ಅ) ಹಾಗೂ ಯತ್ನಾಳ ಗಡಿ ಭಾಗದ ಚೆಕ್‌ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯದಿಂದ ನಮ್ಮ ಜಿಲ್ಲೆಯ ಮೂಲಕ ಕರ್ನಾಟಕ ಪ್ರವೇಶಿಸುವ ವ್ಯಕ್ತಿಗಳಿಗೆ ಕೋವಿಡ್ ನಿಯಮದಂತೆ ಪ್ರವೇಶ ನೀಡಬೇಕು ಎಂದರು.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರು ಲಸಿಕೆ ಪಡೆಯಲಿ ಅಥವಾ ಪಡೆಯದೇ ಇರಲಿ ಕಡ್ಡಾಯವಾಗಿ 72 ಗಂಟೆ ಒಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರಬೇಕು. ನೆಗೆಟಿವ್ ವರದಿ ಇರದಿದ್ದರೆ ರಾಜ್ಯದ ಒಳಗೆ ಪ್ರವೇಶವಿಲ್ಲ. ಕಾರು, ಬೈಕ್ ಸೇರಿದಂತೆ ಸ್ವಂತ ವಾಹನಗಳ ಮೂಲಕ ಬರುವವರಿಗೆ ಈ ನಿಯಮ ಅನ್ವಯವಾಗುತ್ತದೆ. ಬಸ್ ಮೂಲಕ ಜಿಲ್ಲೆಗೆ ಪ್ರಯಾಣಿಸುವ ಪ್ರಯಾಣಿಕರ ನೆಗೆಟಿವ್ ವರದಿ ಖಚಿತ ಪಡಿಸಿಕೊಳ್ಳುವುದು ಬಸ್ ಕಂಡಕ್ಟರ್ ಜವಾಬ್ದಾರಿಯಾಗಿದೆ ಎಂದು ಸೂಚಿಸಿದರು.
ಗಡಿಭಾಗದಲ್ಲೇ ಆರ್‌ಟಿಪಿಸಿಆರ್ ತಪಾಸಣೆ:
ಮಹಾರಾಷ್ಟ್ರದಿಂದ ಬರುವಾಗ ಆರ್ ಟಿಪಿಸಿಆರ್ ನೆಗೆಟಿವ್ ವರದಿ ತರದೇ ಇರುವವರಿಗೆ ಗಡಿ ಭಾಗದ ಚೆಕ್‌ಪೋಸ್ಟ್ ಸ್ಥಳದಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ಆರ್ ಟಿಪಿಸಿಆರ್ ತಪಾಸಣೆ ಕಾರ್ಯ ಚುರುಕಾಗಿ ನಡೆಯುತ್ತಿದೆ. ಆರ್‌ಟಿಪಿಸಿಆರ್ ವರದಿ ಬರುವವರೆಗೂ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ತಿಕೋಟಾ ತಾಲೂಕಿನ 4 ಚೆಕ್‌ಪೋಸ್ rಗಳಲ್ಲಿ ದಿನದ 24 ಗಂಟೆಯೂ ಪೊಲೀಸ್, ಕಂದಾಯ, ಆರೋಗ್ಯ, ಶಿಕ್ಷಣ ಇಲಾಖೆ ಸಿಬ್ಬಂದಿ ಒಳಗೊಂಡ ಜಂಟಿ ತಂಡದ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ. ತಾಲೂಕು ಆಡಳಿತ ಚೆಕ್‌ಪೋಸ್ಟ್‌ಗಳಿಗೆ ಬೇಕಾಗುವ ಎಲ್ಲ ಸವಲತ್ತು ನೀಡಿದ್ದು, ಮೂರನೇ ಅಲೆ ತಡೆಗಟ್ಟಲು ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ತಹಶೀಲ್ದಾರ್ ಸಂತೋಷ ಮ್ಯಾಗೇರಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಉಪ
ವಿಭಾಗಾಧಿಕಾರಿ ಬಲರಾಮ ರಾಠೊಡ, ಉಪ ತಹಶೀಲ್ದಾರ್ ರಾಜು ಸುಣಗಾರ, ಪಿಎಸ್‌ಐ ಅನಿತಾ ರಾಠೊಡ, ಆರೋಗ್ಯ, ಕಂದಾಯ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಇದ್ದರು.