Advertisement

Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ

12:33 PM Jul 03, 2024 | Team Udayavani |

ವಿಜಯಪುರ : ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಸಂಭವಿಸಿದ್ದ ತೆಪ್ಪ ಮಗುಚಿಬಿದ್ದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಮೂವರ ಶವ ಹೊರ ತೆಗೆಯಲಾಗಿದ್ದು, ನಾಪತ್ತೆ ಆಗಿರುವ ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರೆದಿದೆ.

Advertisement

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಏತ ನೀರಾವರಿಯ ಬಳೂತಿ ಜಾಕವೆಲ್ ಬಳಿ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ 8 ಜನರು ನೀರಿನಲ್ಲಿ ನಾಪತ್ತೆ ಆಗಿದ್ದರು.ಜಾಕವೆಲ್ ಬಳಿ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಲು ಬರುತ್ತಲೇ ತಪ್ಪಿಸಿಕೊಳ್ಳಲು ನದಿಯಲ್ಲಿ ಮೀನುಗಾರರು ಇರಿಸಿದ್ದ ತೆಪ್ಪದ ಮೂಲಕ ಮತ್ತೊಂದು ದಡಕ್ಕೆ ಹೊರಟಾಗ ತೆಪ್ಪ ಮಗುಚಿ ದುರಂತ ಸಂಭವಿಸಿತ್ತು. ಮುಳುಗಿದ ತೆಪ್ಪದಲ್ಲಿದ್ದ ಕೊಲ್ಹಾರ ಪಟ್ಟಣದ ಸಚಿನ್ ಕಟಬರ್ ಹಾಗೂ ಬಶೀರ ಹೊನವಾಡ ಇವರು ಈಜಿ ದಡ ಸೇರಿದ್ದರು.ಇತ್ತ ನೀರಿನಲ್ಲಿ ಮುಳುಗುತ್ತಿದ್ದ ಕೂಡಗಿ ಗ್ರಾಮದ ಫಾರೂಖ್ ಎಂಬಾತನನ್ನು ನದಿ ತೀರದಲ್ಲಿದ್ದ ಮುತ್ತು ಬಾನಿ ಹಾಗೂ ಜಗದೀಶ ಸುಬಗದ ಎಂಬರು ರಕ್ಷಣೆ ಮಾಡಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಬಳಿಕ ಫಾರೂಖ್ ಸ್ಥಳದಿಂದ ಪರಾರಿಯಾಗಿದ್ದ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಅಗ್ನಿಶಾಮಕ ಸೇವಾ ಇಲಾಖೆಯ ಸಿಬಂದಿ ನೆರವಿನೊಂದಿಗೆ ಹರಿಯುವ ನದಿಯಲ್ಲಿ ನಾಪತ್ತೆ ಆಗಿರುವರಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು.ಸಂಜೆಯ ವೇಳೆಗೆ ಪುಂಡಲೀಕ ಯಂಕಂಚಿ ಎಂಬಾತ ಶವವಾಗಿ ಪತ್ತೆಯಾಗಿದ್ದ.

ಈ ಮಧ್ಯೆ ಕತ್ತಲು ಆವರಿಸಿದ್ದರಿಂದ ನಾಪತ್ತೆ ಆಗಿದ್ದ ಇತರರ ಶೋಧ ಕಾರ್ಯದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಅಲ್ಲದೇ ನದಿಯಲ್ಲಿ ಮೀನುಗಾರರು ಹಾಕಿರುವ ಬಲೆ ಕಾರ್ಯಾಚರಣೆ ನಡೆಸಲು ಮುಂದಾಗಿದ್ದ ಪರಿಣಿತ ಈಜುಗಾರರಿಗೂ ತೊಡಕಾಗಿತ್ತು. ಹೀಗಾಗಿ ಕಾರ್ಯಾಚರಣೆ ತಂಡ ನದಿ ತೀರದಲ್ಲೇ ಬೀಡುಬಿಟ್ಟಿದ್ದರೂ, ಶೋಧ ಕಾರ್ಯವನ್ನು ಸ್ಥಗಿತಗೊಳಿಸಿತ್ತು.

ಬುಧವಾರ ಬೆಳಗ್ಗೆ ನಾಪತ್ತೆ ಆಗಿರುವವರ ಶೋಧಕ್ಕಾಗಿ ನದಿಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ತಯ್ಯಬ್ ಚೌಧರಿ ಹಾಗೂ ದಶರಥ ಗೌಡರ ಎಂಬವರ ಶವಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ.

Advertisement

ಇತ್ತ ಇನ್ನೂ ನಾಪತ್ತೆ ಆಗಿರುವ ರಫೀಕ್ ಬಾಂಬೆ ಹಾಗೂ ಮೆಹಬೂಬ್ ವಾಲೀಕಾರ ಇವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಋಷಿಕೇಶ ಭಗವಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next