ವಿಜಯಪುರ: ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಸಂಭವಿಸಿದ್ದ ತೆಪ್ಪ ದುರಂತದಲ್ಲಿ ನಾಪತ್ತೆಯಾಗಿದ್ದ ಮತ್ತೊಬ್ಬನ ಶವ ಪತ್ತೆಯಾಗಿದೆ. ಇದರೊಂದಿಗೆ ನಾಲ್ವರ ಶವ ಪತ್ತೆಯಾದಂತಾಗಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಜುಲೈ 2 ರಂದು ಸಂಜೆ ತೆಪ್ಪ ಮುಳುಗಿ ಐವರು ನಾಪತ್ತೆ ಆಗಿದ್ದು, ಈವರೆಗೆ ಮೂವರ ಶವ ಪತ್ತೆಯಾಗಿದ್ದವು. ನಾಪತ್ತೆ ಆದವರಿಗಾಗಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದಾಗ ನದಿ ತೀರದಲ್ಲಿ ಶವವೊಂದು ತೇಲಿಬಂದಿದೆ. ಪತ್ತೆ ಆಗಿರುವ ಶವ ಮಹಿಬೂಬ್ ವಾಲೀಕಾರ ಎಂದು ಗುರುತಿಸಲಾಗಿದೆ. ಇದರೊಂದಿಗೆ ಬಳೂತಿ ಕೃಷ್ಣಾ ನದಿ ತೆಪ್ಪ ದುರಂತದಲ್ಲಿ ನಾಪತ್ತೆ ಆಗಿದ್ದ ಐವರಲ್ಲಿ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.
ಶವವಾಗಿ ಪತ್ತೆಯಾದ ನಾಲ್ವರನ್ನು ಪುಂಡಲೀಕ ಯಂಕಂಚಿ, ತಯ್ಯಬ ಚೌಧರಿ, ದಶರಥ ಗೌಡರ, ಮಹಿಬೂಬ್ ವಾಲಿಕಾರ ಎಂದು ಗುರುತಿಸಲಾಗಿದೆ.
ತೆಪ್ಪ ದುರಂತದಲ್ಲಿ ನಾಪತ್ತೆ ಆಗಿರುವ ಇನ್ನೋರ್ವನಾದ ರಫೀಕ ಬಾಂಬೆ ಎಂಬಾತನಿಗಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಬಳೂತಿ ಬಳಿ ಕೃಷ್ಣಾ ನದಿಯಲ್ಲಿ ಮಂಗಳವಾರ ಸಂಭವಿಸಿರುವ ತೆಪ್ಪ ದುರಂತದಲ್ಲಿ ನಾಪತ್ತೆ ಆದವರಿಗಾಗಿ ಅಗ್ನಿಶಾಮಕ ಸೇವೆ ಠಾಣೆಗಳ 30 ಸಿಬ್ಬಂದಿ ಯಾಂತ್ರೀಕೃತ 5 ಬೋಟ್ ಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ನದಿಯಲ್ಲಿ ನಾಪತ್ತೆ ಆಗಿರುವ ಐದನೇ ವ್ಯಕ್ತಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.