ವಿಜಯಪುರ: ವಿಜಯಪುರ ಜಿಲ್ಲೆಯ ಉತ್ತರ-ದಕ್ಷಿಣದ ಗಡಿಯಲ್ಲಿ ನಾಡಿನ ಜೀವನದಿ ಕೃಷ್ಣಾ ಹಾಗೂ ಉಪ ನದಿ ಭೀಮೆಯ ಮಡಿಲಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳ ತಂಡ ನದಿಗಳ ತೀರ ಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಳೆದ ಒಂದು ವಾರದಿಂದ ಎರಡೂ ನದಿಗಳಲ್ಲಿ ಭಾರಿ ಪ್ರಮಾಣ ನೀರು ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಲಾಲ್ ಬಹಾದ್ದೂರ ಜಲಾಶಯಕ್ಕೆ ಕೃಷ್ಣಾ ನದಿ ಮೂಲಕ 2-3 ಲಕ್ಷ ಕ್ಯೂಸೆಕ್ ನೀರು ಒಳ ಹರಿವು ಇದೆ.
ಶನಿವಾರ ಕೃಷ್ಣಾ ನದಿ ತೀರದ ಮುದ್ದೇಬಿಹಾಳ, ನಿಡಗುಂದಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಭೂಬಾಲನ್ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ತೆಪ್ಪದಲ್ಲಿ ತೆರಳಿ ಪ್ರವಾಹದ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು.
ಶಾಸ್ತ್ರಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳ ಹರಿವಿದ್ದು, 123 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಹೊರತಾಗಿ ಹೆಚ್ಚುವರಿ ನೀರನ್ನು ಕೆಳ ಭಾಗದಲ್ಲಿ ಬಸವಸಾಗರ ಜಲಾಶಯಕ್ಕೆ ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಪರಿಣಾಮ ಕೃಷ್ಣಾ ನದಿ ತೀರದ ಅರಳದಿನ್ನಿ, ಯಲಗೂರು, ಯಲ್ಲಮ್ಮನ ಬೂದಿಹಾಳ, ಕಾಳಗಿ, ಹೊಳೆ ಮಸೂತಿ ಮುದೂರು, ಗಂಗೂರು, ದೇವೂರು, ನಾಗರಾಳ ಸೇರಿದಂತೆ ಬಹುತೇಕ ಇತರೆ ಗ್ರಾಮಗಳ ಜಮೀನುಗಳು ಜಲಾವೃತವಾಗಿದೆ.
ಜಿಲ್ಲಾಧಿಕಾರಿ ಜತೆ ಮುದ್ದೇಬಿಹಾಳ ತಾಲೂಕ ಉಸ್ತುವಾರಿ ಅಧಿಕಾರಿ ಶಂಕರಗೌಡ ಸೋಮಾನಾಳ, ಜಿ.ಪಂ. ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸೇರಿದಂತೆ ಇತರೆ ಅಧಿಕಾರಿಗಳು ಕೃಷ್ಣಾ ನದಿ ತೀರದ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮತ್ತೊಂದೆಡೆ ಭೀಮಾ ನದಿಯೂ ಮೈದುಂಬಿ ಹರಿಯುತ್ತಿದೆ. 4 ವರ್ಷಗಳ ಹಿಂದೆ ನಿರೀಕ್ಷೆ ಮೀರಿ ಅಧಿಕ ಪ್ರಮಾಣದಲ್ಲಿ ಭೀ ನದಿಗೆ ನೀರು ಹರಿದು ಬಂದಾಗ ಸೊನ್ನ ಬ್ಯಾರೇಜ್ ಗೇಟ್ ತೆರೆದು ನೀರು ಬಿಡಲಾಗದೇ ಆಲಮೇಲ, ಇಂಡಿ, ಚಡಚಣ ತಾಲೂಕಿನ ನದಿ ತೀರದ ಹಳ್ಳಿಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು.
ಇದರಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ಇಂಡಿ ಉಪ ವಿಭಾಗದ ಸಹಾಯಕ ಆಯುಕ್ತ ಆಬೀದ್ ಗದ್ಯಾಳ ಸೊನ್ನ ಬ್ಯಾರೇಜ್‌ಗೆ ಭೇಟಿ ನೀಡಿ, ಗೇಟ್‌ಗಳ ಸ್ಥಿತಿಗತಿ ಪರಿಶೀಲಿಸಿದರು. ಅಲ್ಲದೇ ಆಲಮೇಲ ತಾಲೂಕಿನಲ್ಲಿ ಭೀಮಾ ನದಿ ತೀರದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪ್ರವಾಹದ ಮುನ್ನೆಚ್ಚರಿಕೆಯಾಗಿ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು.