Advertisement

ಮಹಾತ್ಮರಿಗೆ ಜಾತಿ ಚೌಕಟ್ಟು ಬೇಡ

03:20 PM Nov 16, 2019 | Naveen |

ವಿಜಯಪುರ: ಜಾತೀಯತೆ, ಮೂರ್ತಿ ಪೂಜೆ ವಿರುದ್ಧ ಹೋರಾಡಿ ಅದನ್ನು ಹೋಗಲಾಡಿಸಲು ಕನಕದಾಸರು ಪ್ರಯತ್ನಿಸಿದ್ದಾರೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಎಲ್ಲ ಮಹಾನ್‌ ವ್ಯಕ್ತಿಗಳನ್ನು ನಾವೆಲ್ಲರೂ ಸೇರಿ ಅವರನ್ನು ಒಂದೊಂದು ಜಾತಿಗೆ ಗಂಟು ಹಾಕಿದ್ದು ದೊಡ್ಡ ದುರಂತ ಎಂದು ಬೆಂಗಳೂರಿನ ಮಹಾರಾಣಿ ವಲಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ| ಕೆ.ವೈ. ನಾರಾಯಣಸ್ವಾಮಿ ವಿಷಾದಿಸಿದರು.

Advertisement

ಶುಕ್ರವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಕನಕದಾಸರ ಜಯಂತಿ ಅಂಗವಾಗಿ ಕನಕ ಅಧ್ಯಯನ ಪೀಠದಿಂದ ಹಮ್ಮಿಕೊಂಡಿದ್ದ ಚಿಂತನಗೋಷ್ಠಿಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಕನಕದಾಸರು ಸೇರಿದಂತೆ ಹಲವಾರು ಮಹಾನ್‌ ಚಿಂತಕರು ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ ಗೆದ್ದವರು. ಸಮಾಜದಲ್ಲಿ ಬೇರು ಬಿಟ್ಟಿರುವ ಜಾತೀಯತೆ ತೊಲಗಿಸುವಲ್ಲಿ ಶ್ರಮಿಸಿ ಸಂತ-ಮಹಾತ್ಮರಲ್ಲಿ ಕನಕದಾಸರು ಪ್ರಮುಖರು ಎಂದರು.

ಇಂಥ ಸಂತರ ವೈಜ್ಞಾನಿಕ ಬೋಧನೆ ನಂತರವೂ ಪ್ರಸ್ತುತ ವಿಜ್ಞಾನ-ತಂತ್ರಜ್ಞಾನ ಸಮಾಜದಲ್ಲೂ ಮೂಢನಂಬಿಕೆ, ಮೂರ್ತಿ ಪೂಜೆ ಮಾಡಲಾಗುತ್ತದೆ. ಜಾತೀಯತೆ ತೊಲಗಿಸಿ ಸಮಾಜಕ್ಕೆ ಮಾನವೀಯ ಮೌಲ್ಯ ಬಿತ್ತಿದ ಮಹಾತ್ಮರಿಗೆ ಜಾತಿಯ ಚೌಕಟ್ಟು ಹಾಕುತ್ತಿರುವುದು ನಿಜಕ್ಕೂ ದುರಂತ ಎಂದರು. ಇನ್ನಾದರೂ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಿದೆ. ಸಂತ-ಮಹಾತ್ಮರನ್ನು ಜಾತಿಯ ಮೂಲದಿಂದ ನೋಡದೇ ಅವರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು. ಸಮಾಜಕ್ಕೆ ಅವರು ಬಿಟ್ಟುಹೋಗಿರುವ ಮೌಲಿಕ ಚಿಂತನೆ ಮನವರಿಕೆ ಮಾಡಿಕೊಂಡು ಬದುಕುವುದನ್ನು ಕಲಿಯಬೇಕಿದೆ ಎಂದರು.

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಕಳಕಳಿ ತೋರಿಸಿದ್ದಾರೆ. ಅವರ ಕೀರ್ತನೆಗಳಲ್ಲಿ ಮೋಸ, ಢಾಂಬಿಕ, ವಂಚನೆ ವಿರುದ್ಧ ಹಾಗೂ ಸಾಮಾಜಿಕ ಸಮಾನತೆ, ಸಮಾಜದ ಅಭಿವೃದ್ಧಿಪರ ಮೂಡಿಬಂದ ಕೀರ್ತನಗಳನ್ನು ನೋಡಬಹುದು. ಆದರೆ ಈ 20ನೇ ಶತಮಾನದಲ್ಲಿ ಕನಕದಾಸರ ಕೀರ್ತನೆ ನೋಡುವ ದೃಷ್ಟಿಯೇ ಬದಲಾಗಿದೆ. ಅವರ ಕೀರ್ತನೆಗಳನ್ನು ಓದುವ ರೀತಿ ಬದಲಿಸಲಾಗಿದೆ. ಇದು ಮಹಾ ಅಪರಾಧವಾಗಿದೆ. ಅವರ ಕೀರ್ತನೆಗಳಲ್ಲಿರುವ ಒಳ ಅರ್ಥ ಎಂದಿಗೂ ಬದಲಿಸಬಾರದು ಎಂದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ| ಎಸ್‌.ಎ. ಖಾಜಿ ಅಧ್ಯಕ್ಷತೆ ವಹಿಸಿದ್ದರು. ಕನಕ ಅಧ್ಯಯನ ಪೀಠದ ಸಂಯೋಜಕ ಡಾ| ಜಿ.ಎನ್‌. ಕಿರಣ, ಡಾ| ವಿಷ್ಣು ಶಿಂಧೆ, ಸುಜ್ಞಾನಿ ಶಿಂಗೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next