Advertisement

ಕನಕದಾಸರನ್ನು ಓದುವುದು ಇಂದಿನ ಅಗತ್ಯ: ಜಾನಕಿ

03:38 PM Jul 31, 2019 | Naveen |

ವಿಜಯಪುರ: ಸಮುದಾಯಗಳ ಮೂಲಕ ಮತ್ತು ವೈಯಕ್ತಿಕವಾಗಿ ಕನಕದಾಸರನ್ನು ಓದುವ ಮೂಲಕ ಅವರನ್ನು ಜೀವಂತವಾಗಿಡುವ ಕೆಲಸ ಆಗಬೇಕಿದೆ. ಮತ್ತೂಂದೆಡೆ ನಮ್ಮ ಚಿಂತನೆ ವಿಸ್ತರಿಕೊಳ್ಳುವ ಪ್ರಯತ್ನ ನಿರಂತರವಾಗಿ ಇರಬೇಕಿರುವುದು ಇಂದಿನ ತುರ್ತಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಜಾನಕಿ ಅಭಿಪ್ರಾಯಪಟ್ಟರು.

Advertisement

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನಕದಾಸರನ್ನು ನಾನೇಕೆ ಓದಬೇಕು ಎಂಬ ವಿಷಯದ ಕುರಿತ ಮೂರು ದಿನದ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಟಿವಿ, ಮೊಬೈಲ್ ಎಂದೆಲ್ಲ ನಾವು ಅಮೂಲ್ಯ ಸಮಯ ಮೀಸಲಿಡುತ್ತಿದ್ದೇವೆ. ಇದರಲ್ಲಿ ಸ್ವಲ್ಪ ಸಮಯವನ್ನು ಕನಕದಾಸರ ಸಾಹಿತ್ಯ ಧ್ಯಯನಕ್ಕಾಗಿ ನೀಡಿದರೆ ನಮ್ಮ ಬದುಕು ಸಾರ್ಥಕತೆ ಪಡೆಯುತ್ತದೆ. ಜೊತೆಗೆ ನಮ್ಮ ಜ್ಞಾನ ಕ್ಷಿತಿಜ ವಿಸ್ತರಿಸುತ್ತದೆ ಎಂದು ವಿಶ್ಲೇಷಿಸಿದರು.

ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಮಾತನಾಡಿ, ಆತ್ಮವಿಶ್ವಾಸ, ಆತ್ಮ ನಿವೇದನೆ, ಅರಿವಿನ ವಿಸ್ತರಣೆ ಮಾಡುವ ಮನೋಧರ್ಮ, ಆನಂದ ಇವೆಲ್ಲವೂ ಒಂದುಗೂಡುವ ಭಾವವೇ ಭಕ್ತಿ. ಆದರೆ ಇಂದು ನಾವು ಈ ಭಕ್ತಿಯನ್ನು ಜಾತಿ, ಧರ್ಮಕ್ಕೆ ಅಂಟಿಸಿ ಮಾರುಕಟ್ಟೆಯ ಸರಕು ಎಂಬಂತೆ ನೋಡುತ್ತಿದ್ದೇವೆ ಎಂದು ವಿಷಾದಿಸಿದರು.

ಜಾತಿ ಎಂಬುದು ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಮೂಲವಾಗಿದೆ. ಇದು ಮನುಷ್ಯನ ಕ್ರಿಯಾಶೀಲತೆಯನ್ನು ಕೊಲ್ಲುತ್ತದೆ. ಮತ್ತು ಮಾನವ ಕುಲಕ್ಕೆ ಶಾಪವಾಗಿದೆ ಎಂಬುವುದನ್ನು ನಾವು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ.ಬಹುತ್ವದ ಅದ್ಭುತ ರೂಪ ಕನಕರ ಕೀರ್ತನೆ ಮತ್ತು ಕಾವ್ಯಗಳಲ್ಲಿ ಇದೆ. ದಾಸ ಎಂದರೆ ಗುಲಾಮ ಅಥವಾ ಕೆಲಸದವನು ಎಂದರ್ಥವಲ್ಲ. ದಾಸ ಎಂದರೆ ಎಲ್ಲ ಲೌಕಿಕ ಚಿಂತನೆಗಳನ್ನು, ಕ್ಲೀಷೆಗಳನ್ನು ಮೀರಿ ತಲುಪುವ ಸ್ಥಿತಿ. ಈ ಸ್ಥಿತಿಯನ್ನು ತಲುಪಿದ ಶ್ರೇಷ್ಠತೆ ಕನಕರದ್ದು. ಆದಕಾರಣ ನಾವು ಕನಕರನ್ನು ಓದಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

Advertisement

ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಜಾನಕಿ ಅವರು ರಾಜ್ಯದ ವಿವಿಧ ಶಾಲಾ-ಕಾಲೇಜುಗಳ ಶಿಕ್ಷಕರ, ಮಹಾವಿದ್ಯಾಲಯಗಳಿಂದ ಆಗಮಿಸಿದ್ದ ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸಿದರು.

ಕುಲಪತಿ ಸಬಿಹಾ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವೆ ಆರ್‌.ಸುನಂದಮ್ಮ, ಶಿಬಿರದ ನಿರ್ದೇಶಕ ಎ.ಎಂ. ಶಿವಸ್ವಾಮಿ ಮತ್ತು ಡಾ| ಡಿ.ಪುರುಷೋತ್ತಮ ವೇದಿಕೆಯಲ್ಲಿದ್ದರು. ಕಾರ್ಯಕ್ರಮ ಸಂಯೋಜಕ ಡಾ| ಜಿ.ಎನ್‌. ಕಿರಣ ಸ್ವಾಗತಿಸಿದರು. ಗೀತಾ ಎಚ್.ಎನ್‌. ಪರಿಚಯಿಸಿದರು. ಡಾ| ಸುರೇಖಾ ರಾಠೊಡ ನಿರೂಪಿಸಿದರು. ಭಾಗ್ಯಶ್ರೀ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next