Advertisement

ಸ್ವಾಸ್ತ್ಯ ಸಮಾಜಕ್ಕಾಗಿ ಲಿಂಗ ಸಮಾನತೆ ಅಗತ್ಯ: ನ್ಯಾ|ಕಾರಬಾರಿ

05:32 PM Feb 27, 2020 | Naveen |

ವಿಜಯಪುರ: ಉತ್ತಮ ಸಮಾಜ, ಸದೃಢ ಭಾರತ ನಿರ್ಮಾಣದಲ್ಲಿ ಗಂಡು-ಹೆಣ್ಣು ಇಬ್ಬರೂ ಪ್ರಮುಖರು. ಇದಕ್ಕಾಗಿ ಸಮಾಜದಲ್ಲಿ ಮನೆ ಮಾಡಿರುವ ಲಿಂಗ ತಾರತಮ್ಯ ಮನೋಭಾವ ಬದಲಾಯಿಸುವ ಅಗತ್ಯವಿದೆ. ಈ ವಿಷಯದಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದೆ ಎಂದು ಬೇಟಿ ಬಚಾವೋ, ಬೇಟಿ ಪಡಾವೋ ಟಾಸ್ಕ್ ಫೋರ್ ಸಮಿತಿ ಸದಸ್ಯ ನ್ಯಾಯಾಧೀಶ ರವೀಂದ್ರ ಕಾರಬಾರಿ ಹೇಳಿದರು.

Advertisement

ನಗರದ ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಪಿಸಿ ಮತ್ತು ಪಿಎನ್‌ಡಿಟಿ ಅಡಿಯಲ್ಲಿ ನೋಂದಾಯಿತ ಸಂಸ್ಥೆ ತಜ್ಞ ವೈದ್ಯರಿಗೆ ಹೆಣ್ಣು ಮಗುವನ್ನು ಉಳಿಸಿ ಹೆಣ್ಣು ಮಗುವನ್ನು ಓದಿಸಿ ಘೋಷ ವಾಕ್ಯದೊಂದಿಗೆ ಪಿಸಿ ಮತ್ತು ಪಿಎನ್‌ಡಿಪಿಟಿ ಕಾಯ್ದೆ ಕುರಿತ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994ರಲ್ಲಿ ಅದನ್ನು 2003ರಲ್ಲಿ ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ಈ ಕಾಯ್ದೆ ಅಡಿಯಲ್ಲಿ ಲಿಂಗಪತ್ತೆ ಮಾಡುವವರನ್ನು ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ಬಡತನ, ಮೂಢನಂಬಿಕೆ, ಗಂಡು ಮಗುವಿನ ಅಪೇಕ್ಷೆ ಕಾರಣದಿಂದಾಗಿ ಲಿಂಗ ಜನ್ಯ ವ್ಯತ್ಯಾಸ ಕಂಡು ಬಂದಿದೆ. 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 934ರಷ್ಟು ಲಿಂಗಾನುಪಾತವಿದ್ದು, ಲಿಂಗ ಸಮಾನತೆ ತರುವುದಕ್ಕಾಗಿ ಕೇಂದ್ರ ಸರ್ಕಾರ 2015ರಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಜಾರಿ ಮಾಡಿದೆ. ಈ ಯೋಜನೆ ಅನುಷ್ಠಾನದಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ದೇವರ ಸಮಾನವಾದ ವೈದ್ಯರು ಭ್ರೂಣಲಿಂಗ ಪತ್ತೆ ನಿರಾಕರಿಸಿ ಹೆಣ್ಣು ಮಗುವನ್ನು ಉಳಿಸುವ ಅಭಿಯಾನಕ್ಕೆ ಪ್ರಾಮಾಣಿಕ ಕೈ ಜೋಡಿಸಿ ಎಂದು ಸೂಚಿಸಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ| ಮಹೇಂದ್ರ ಕಾಪ್ಸೆ ಮಾತನಾಡಿ, 2015ರಲ್ಲಿ ಅನುಷ್ಠಾನಗೊಂಡ ಕೇಂದ್ರ ಸರ್ಕಾರದ ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿ ಅನಿಷ್ಠಾನಗೊಳಿಸಿದೆ. ಪರಿಣಾಮ ವಿಜಯಪುರ ಇದಕ್ಕಾಗಿ ಜಿಲ್ಲೆ ರಾಷ್ಟ್ರ ಪ್ರಶಸ್ತಿ ಪಡೆದಿದೆ.

Advertisement

2020 ಜನೇವರಿಗೆ 993.17ರಷ್ಟು ಲಿಂಗಾನುಪಾತ ಹೆಚ್ಚಾಗಿದೆ. ಸಂಪೂರ್ಣ ಲಿಂಗ ಸಮಾನತೆ ಸಾಧಿಸಲು ತಜ್ಞ ವೈದ್ಯರ ಸಹಕಾರ ಅಗತ್ಯ ಎಂದರು. ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಕುರಿತು ಉಪನ್ಯಾಸ ನೀಡಿದ ಕಾನೂನು ಸಲಹೆಗಾರ್ತಿ ಅಖೀಲಾ, ಸದರಿ ಕಾಯ್ದೆಯಂತೆ ಭ್ರೂಣ ಲಿಂಗ ಪತ್ತೆ, ಭ್ರೂಣ ಲಿಂಗ ಆಯ್ಕೆಗೆ ಯಾವುದೇ ರೀತಿ ಜಾಹೀರಾತು ನೀಡುವಂತಿಲ್ಲ. ಅಪರಾಧ ದೃಢ ಪಟ್ಟರೆ ಪ್ರಥಮ ಅಪರಾಧವಾದಲ್ಲಿ ರಾಜ್ಯ ವೈದ್ಯಕೀಯ ಮಂಡಳಿಯಿಂದ ವೈದ್ಯಕೀಯ ವೃತ್ತಿ ಮಾಡದಂತೆ 5 ವರ್ಷ ನಿಷೇಧಿ ಸಲಾಗುತ್ತದೆ. ನಂತರದ ಅಪರಾಧಕ್ಕೆ ಶಾಶ್ವತವಾಗಿ ರಾಜ್ಯ ವೈದ್ಯಕೀಯ ಮಂಡಳಿಯಿಂದ ಇಂಥ ವೈದ್ಯರ ಹೆಸರನ್ನು ತೆಗೆದು ಹಾಕಲಾಗುವುದು. ಮೊದಲ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಲಾಗುವುದು. ನಂತರದ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಜೊತೆಗೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದರು.

ನಂತರ ಪಿಸಿ ಮತ್ತು ಪಿಎನ್‌ಡಿಟಿ ಉಪ ನಿರ್ದೇಶಕ ಡಾ| ರಾಮಚಂದ್ರ ಬೈರಿ, ಕಾನೂನು ಸಲಹೆಗಾರ ತುಳಸಿರಾಮ ಸೂರ್ಯವಂಶಿ, ಜಿಲ್ಲಾ ಕುಟುಂಬ ಕಲ್ಯಾಣಾಧಿ ಕಾರಿ ಡಾ| ರಾಜೇಶ್ವರಿ ಗೊಲಗೇರಿ, ಸಾಮಾಜಿಕ ಕಾರ್ಯಕರ್ತ ಪೀಟರ್‌ ಅಲೆಕ್ಸಾಂಡರ್‌, ಚಿಕ್ಕ ಮಕ್ಕಳ ತಜ್ಞ ಡಾ| ಎಲ್‌.ಎಚ್‌. ಬಿದರಿ ಇದ್ದರು. ಸವಿತಾ ಅಳ್ಳಗಿ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ| ಸುರೇಶ ಹೊಸಮನಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next