ವಿಜಯಪುರ: ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನವನ್ನು ಆರಂಭಿಕವಾಗಿ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿ ಎಂದು ಜಿಲ್ಲಾಕಾರಿ ವೈ.ಎಸ್. ಪಾಟೀಲ ಅವರು ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿಗೆ ಸೂಚಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಯುವ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಕುರಿತ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ವಿಜಯಪುರ ಜಿಲ್ಲೆ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿರುವ ಜಿಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ಪ್ರಥಮ ಆದ್ಯತೆಯಾಗಿ ಆಯ್ಕೆ ಮಾಡಿಕೊಂಡಿದ್ದು, ಜಲಶಕ್ತಿ ಅಭಿಯಾನ ಮೂಲಕ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಿದರು.
ಜಿಪಂ ಉಪ ಕಾರ್ಯದರ್ಶಿಗಳು, ಜಿಲ್ಲೆಯ ಎಲ್ಲ ತಾಪಂ ಇಒಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ, ಅರಣ್ಯ, ಜಲ ಸಂಪನ್ಮೂಲಕ್ಕೆ ಸಂಬಂಧಿಸಿದ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿಗಳು ನೇರ ಸಂಪರ್ಕ ಇರಿಸಿಕೊಳ್ಳಬೇಕು. ಯುವ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಸಂಘಟಿಸಬೇಕು. ವಿವಿಧ ಯುವಕ-ಯುವತಿ ಕ್ಲಬ್‌ಗಳ ಅಭಿವೃದ್ಧಿ, ಯುವ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿ, ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ, ವಿವಿಧ ಕಲೆ ಮತ್ತು ಸಂಸ್ಕೃತಿ ಹಾಗೂ ದೇಶಭಕ್ತಿ, ಸ್ವಚ್ಛತಾ ಅಭಿಯಾನ, ಅರಣ್ಯೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯನ್ವಯ ನಿಗದಿಪಡಿಸಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವವಹಿಸಬೇಕು ಎಂದು ಸೂಚಿಸಿದರು.
ಯುವ ಸಮುದಾಯ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅನೇಕ ರೀತಿ ಬದಲಾವಣೆ ತರಲು ಸಹ ಸಾಧ್ಯವಿದ್ದು, ನೆಹರು ಯುವ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾರ್ಯಕ್ರಮಗಳನ್ನು ವೇಳಾಪಟ್ಟಿಯನ್ವಯ ಸಿದ್ಧಪಡಿಸಿ ಹಮ್ಮಿಕೊಳ್ಳಬೇಕು. ಗ್ರಾಮಾಂತರ ಪ್ರದೇಶದ ಜನರೊಂದಿಗೆ ನಿರಂತರ ಸಂಪರ್ಕ ಇರಬೇಕಾದ ಹಿನ್ನೆಲೆಯಲ್ಲಿ ಮಾತೃಭಾಷೆಯಲ್ಲಿ ಸಂವಹನ ನಡೆಸಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ವ್ಯವಸ್ಥಿತ ರೀತಿಯಲ್ಲಿ ಇಲಾಖೆ ಕಾರ್ಯ ಚಟುವಟಿಕೆಗಳನ್ನು ಕ್ರಿಯಾಯೋಜನೆಯನ್ವಯ ಹಮ್ಮಿಕೊಳ್ಳಲು ಸೂಚನೆ ನೀಡಿದರು.
ಸಭೆಯಲ್ಲಿ ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ರಾಹುಲ್ ಡೊಂಗರೆ, ನೆಹರು ಯುವ ಕೇಂದ್ರದಿಂದ ಕೈಗೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನೆಹರು ಯುವ ಕೇಂದ್ರದಿಂದ 2019-20ನೇ ಸಾಲಿಗಾಗಿ ಸಿದ್ಧಪಡಿಸಲಾದ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಸಮಿತಿ ಮುಂದೆ ಮಂಡಿಸಿ ಅನುಮೋದನೆ ಪಡೆದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಹೇಂದ್ರ ಕಾಪ್ಸೆ, ಜಿಪಂ ಮುಖ್ಯ ಯೋಜನಾಧಿಕಾರಿ ಎನ್.ಕೆ. ಗೋಠೆ, ವಯಸ್ಕರ ಶಿಕ್ಷಣಾಧಿಕಾರಿ ಅಲ್ಲಾಪುರ, ಎನ್ನೆಸ್ಸೆಸ್ ನೋಡಲ್ ಅಧಿಕಾರಿ ಸಜ್ಜಾದೆ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಮಹೇಶ ಹಾಗೂ ಇತರರು ಇದ್ದರು.