ವಿಜಯಪುರ: ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವ ಮುನ್ನ ಹೊಂದಾಣಿಕೆ, ಸೌಹಾರ್ದತೆ ಇತ್ತು. ಇದೀಗ ಕದಡಲಾಗಿದ್ದು, ಶಿಕ್ಷಣದ ನೆಲೆಗಳಲ್ಲಿ ಜಾತಿ, ಧರ್ಮ, ಪಕ್ಷ ಅಂತೆಲ್ಲ ವೈಮನಸ್ಸು ಸೃಷ್ಟಿಸಲಾಗಿದೆ. ಪರಿಣಾಮ ಹಿಜಾಬ್ ವಿಷಯ ಇದೀಗ ಕೋರ್ಟ್ ಮೆಟ್ಟಿಲೇರಿದೆ ಎಂದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಾಲಾ ಕಾಲೇಜುಗಳಲ್ಲಿ ಪರಸ್ಪರ ಹೊಂದಾಣಿಕೆ, ವಿಶ್ವಾಸ, ಸೌಹಾರ್ದತೆಯನ್ನು ಕದಡಲಾಗಿದೆ ಎಂದರು.
ಸದ್ಯ ಹಿಜಾಬ್ ನಿಷೇಧ ಪ್ರಕರಣ ನ್ಯಾಯಾಲಯದಲ್ಲಿದ್ದು, ಕಾನೂನಾತ್ಮಕವಾಗಿ ವಿಚಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಸಿದ್ದರಾಮಯ್ಯ ಅವರನ್ನು ಎರಡನೇ ಟಿಪ್ಪು ಸುಲ್ತಾನ್ ಎಂದು ಜರಿಯುವ ಇದೇ ಯತ್ನಾಳ್ ಈ ಹಿಂದೆ ಟಿಪ್ಪು ಸುಲ್ತಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋಗಳು ನನ್ನ ಬಳಿ ಇವೆ. ಮಾಧ್ಯಮದವರೇ ಯಾರೋ ನನಗೆ ಅವುಗಳನ್ನು ಕಳಿಸಿದ್ದಾರೆ. ಎಲ್ಲವೂ ನಿಮ್ಮ ಬಳಿಯೇ ಇದ್ದರೂ ನಮ್ಮ ಬಾಯಿಂದ ಹೇಳಿಸುತ್ತೀರಿ ಎಂದು ಬಿಜೆಪಿ ಶಾಸಕ ಯತ್ನಾಳಗೆ ತಿರುಗೇಟು ನೀಡಿದರು.
ರೈತರು, ಬರ, ಸಾಲ ಮನ್ನಾ ವಿಷಯದಲ್ಲಿ ಸಚಿವ ಶಿವಾನಂದ ಪಾಟೀಲ ಏನು ಹೇಳಿಕೆ ನೀಡಿದ್ದಾರೆಂದು ನಾನು ಗಮನಿಸಿಲ್ಲ. ಹೀಗಾಗಿ ಈ ವಿಷಯದಲ್ಲಿ ನೀವು ಅವರನ್ನೇ ಕೇಳಿದರೆ ಸೂಕ್ತ ಎಂದರು.
ವಿಜಯಪುರ ನಗರದಲ್ಲಿ ನಾನು ಹಮ್ಮಿಕೊಂಡಿದ್ದ ವೃಕ್ಷೋಥಾನ ಹೆರಿಟೇಜ್ ಮ್ಯಾರಥಾನ್ ಹಾಗೂ ಬೆಳಗಾವಿಯಲ್ಲಿ ಪ್ರಭಾಕರ ಕೋರೆ ಅವರ ವಿವಾಹದ 50ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪೂರ್ವ ನಿರ್ಧಾರಿತ ಕಾರ್ಯಕ್ರಮಗಳಿದ್ದವು. ಹೀಗಾಗಿ ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶಕ್ಕೆ ಹೋಗಿರಲಿಲ್ಲ. ಆದರೆ ಸಂದೇಶ ಕಳಿಸಿದ್ದೆ ಎಂದು ಸಮಾಜದ ಸಮಾವೇಶಕ್ಕೆ ಗೈರಾಗಿದ್ದಕ್ಕೆ ಸಮಜಾಯಿಷಿ ನೀಡಿದರು