Advertisement

ಯುವಶಕ್ತಿಯಿಂದ ಬದಲಾವಣೆ ಸಾಧ್ಯ

05:33 PM Feb 29, 2020 | Naveen |

ವಿಜಯಪುರ: ವಿದ್ಯಾವಂತ ಯುವಕರು ಸರ್ಕಾರಿ ಹುದ್ದೆ ಪಡೆಯಲು ಯತ್ನಿಸದೇ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿ, ನಿಮ್ಮ ಪ್ರತಿಭೆಯಿಂದ ಸರ್ಕಾರಿ ವೇತನಕ್ಕಿಂತ ಹೆಚ್ಚು ಸಂಪಾದಿಸಲು ಇರುವ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಿ. ಮತ್ತೊಂದೆಡೆ ಯಾವುದೇ ಕಂಪನಿಯ ಉದ್ಯೋಗಕ್ಕೆ ಅಲೆಯುವ ಬದಲು ಗುಡಿ ಕೈಗಾರಿಕೆ ಸೇರಿದಂತೆ ಸ್ವಂತ ಉದ್ಯಮ ಸ್ಥಾಪಿಸಿ ಬೇರೆಯವರಿಗೆ ಉದ್ಯೋಗ ಕೊಡಲು ಮುಂದಾಗಿ ಎಂದು ಉದ್ಯಮಿಯೂ ಆಗಿರುವ ಮೇಲ್ಮನೆ ಸದಸ್ಯ ಹನುಮಂತ ನಿರಾಣಿ ಕಿವಿಮಾತು ಹೇಳಿದರು.

Advertisement

ಶುಕ್ರವಾರ ಜಿಲ್ಲಾಡಳಿತ, ಜಿಪಂ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಐಟಿಐ ಕಾಲೇಜ್‌ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ಬೃಹತ್‌ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ 25 ವಯೋಮಿತಿಗಿಂತ ಕಡಿಮೆ ವಯೋಮಾನದ ಶೇ. 50
ಯುವಕರಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ಯುವಶಕ್ತಿ ಹೊಂದಿರುವ ದೇಶ ಭಾರತ. ಯುವಶಕ್ತಿಯಿಂದ ಮಾತ್ರ ದೇಶದ ಬದಲಾವಣೆ ತರಲು ಸಾಧ್ಯ, ದೇಶವನ್ನು ಬಲಾಡ್ಯ ಮಾಡಲು ಸಾಧ್ಯ ಎಂದು ವಿವೇಕಾನಂದರು ಹೇಳಿದಂತೆ ನೀವೆಲ್ಲರೂ ದೇಶವು ಉನ್ನತಿಯತ್ತ ಸಾಗುವಂತೆ ಪ್ರಯತ್ನಿಸಬೇಕು ಎಂದು ಹೇಳಿದರು.

ಉದ್ಯಮಿಯಾಗು, ಉದ್ಯೋಗ ನೀಡು ಪರಿಕಲ್ಪನೆಯ ಘೋಷವಾಕ್ಯದೊಂದಿಗೆ ನಮ್ಮ ಸರ್ಕಾರಗಳು ಕಾರ್ಯಕ್ರಮ ರೂಪಿಸಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಉದ್ಯೋಗ ಸೃಷ್ಟಿಗೆ ಹಲವಾರು ಯೋಜನೆಗಳು ಲಭ್ಯವಿವೆ. ಮುದ್ರಾ ಯೋಜನೆಯಂಥ ಹಲವು ಉಪಯುಕ್ತ ಯೋಜನೆಗಳನ್ನು ಬಳಸಿಕೊಂಡು, ಸರ್ಕಾರದಿಂದ ಸಹಾಯಧನ ಪಡೆದು, ತಮ್ಮದೇ ಆದ ಸಾಮರ್ಥ್ಯದ ಮೇಲೆ ಗುಡಿ ಕೈಗಾರಿಕೆ, ಹೋಟೆಲ್‌ಗ‌ಳಂತಹ ಉದ್ಯೋಗಗಳನ್ನು ಮಾಡುತ್ತಾ ಮುನ್ನುಗ್ಗಬೇಕು ಎಂದು ಹೇಳಿದರು.

ವಿಜಯಪುರ ಜಿಲ್ಲೆಯು ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಲು, ರಾಜ್ಯದ 70 ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು ಸಂತಸ ತಂದಿದೆ. ವಿಜಯಪುರ ಜಿಲ್ಲೆಯ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರತಿಭೆಯನ್ನು ನಾವು ಕಾಣಬಹುದಾಗಿದ್ದು, ಅವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟರೆ ನಿಮ್ಮ ಸಂಸ್ಥೆ ಹೆಚ್ಚಿನ ಬೆಳವಣಿಗೆ ಕಾಣುತ್ತದೆ. ಉತ್ತರ ಕರ್ನಾಟಕದ ಅಭ್ಯರ್ಥಿಗಳು ಪರಿಶ್ರಮದ ಸಂಕೇತವಾಗಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ನಾವು ಉತ್ತರ ಕರ್ನಾಟಕದ ಉದ್ಯೋಗಿಗಳನ್ನು ಕಾಣಬಹುದಾಗಿದೆ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಇಂದಿನ ಯುವಜನತೆ ಒಂದು ದೊಡ್ಡ ಗುರಿಯನ್ನು ಇಟ್ಟುಕೊಂಡಿರಬೇಕು. ಆ ಗುರಿ ಮುಟ್ಟಲು ಒಂದೇ ದಾರಿಯಲ್ಲಿ ಸಾಗದೇ ಸಿಕ್ಕ ಅವಕಾಶಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮುಂದೆ ಸಾಗಬೇಕು. ಕೇವಲ ಒಂದೇ ದಾರಿಯಲ್ಲಿ ಹೋಗದೆ, ನಿಮ್ಮ ಮುಂದೆ ಸಾಕಷ್ಟು ದಾರಿಗಳಿದ್ದು, ಒಳ್ಳೆಯ ಮಾರ್ಗ ಬಳಸಿಕೊಂಡು ಮುಂದೆ ಸಾಗಬೇಕು. ನಿಮ್ಮ ತಂದೆ ತಾಯಿಯ ಕನಸು ಈಡೇರಿಸಲು ನಿಮ್ಮ ಪ್ರಯತ್ನ ತುಂಬಾ ಅವಶ್ಯಕ ಎಂದು ಹೇಳಿದರು.

ಮೇಲ್ಮನೆ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ವಿಜಯಪುರ ರಾಜ್ಯದ ಹಲವು ನಗರಗಳಂತೆ ವಾಣಿಜ್ಯಿಕ ಕೇಂದ್ರ ಭಾಗ. ವಾಣಿಜ್ಯ ನಗರಿಗಳೆಂದು ಕರೆಯಿಸಿಕೊಳ್ಳುವ ಹುಬ್ಬಳ್ಳಿ, ಬೆಂಗಳೂರು, ಗೋವಾ, ಮುಂಬೈ ನಗರಗಳು ವಿಜಯಪುರ ಜಿಲ್ಲೆಯಿಂದ ಬಹುದೂರ ಇದೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ವಿಜಯಪುರ ಜಿಲ್ಲೆ ರಾಜ್ಯದ ಉತ್ತಮ ವಾಣಿಜ್ಯ ನಗರ ಎಂಬ ಹಿರಿಮೆ ಸಂಪಾದಿಸುವ ಅವಕಾಶ ಇದೆ. ಜೊತೆಗೆ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ದೂರವಾಗಿ ಕೌಶಲ್ಯ ಜಿಲ್ಲೆಯತ್ತ ಸಾಗುತ್ತಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಹೆಚ್ಚಿದಷ್ಟು ಉದ್ಯೋಗಾವಕಾಶಗಳು ಹೆಚ್ಚಲಿವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸಿ ಕಾರ್ಯ ಸನ್ನದ್ಧರಾಗಬೇಕು ಎಂದು ಹೇಳಿದರು.

ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿದರು. ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಅನೂಪಮ ಅಗರವಾಲ್‌, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ, ಉದ್ಯಮಿ ಡಿ.ಎಸ್‌. ಗುಡ್ಡೊಡಗಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next