ವಿಜಯಪುರ: ಮನೆ ಕಾವಲುಗಾರನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ, ಮನೆ ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ಸಂಭವಿಸಿದೆ.
ನಗರದ ಮಹಾವೀರ ಕಾಲೋನಿಯ ಮನೆಯ ಕಾವಲು ಕೆಲಸದಲ್ಲಿದ್ದ ಗುಲಾಬ್ ಮೊಹ್ಮದ್ ಮುಜಾವರ ಎಂಬ ವ್ಯಕ್ತಿಯ ಮೇಲೆ ಕಳ್ಳರು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದು, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಗರದ ಮಹಾವೀರ ಕಾಲೋನಿ ನಿವಾಸಿ ಉದ್ಯಮಿ ಶ್ರೀಕಾಂತ ತೋಸ್ನಿವಾಲ್ ಸಂಬಂಧಿಗಳ ಮದುವೆಯಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ಹೋಗಿದ್ದಾರೆ. ಈ ವೇಳೆ ಗುಲಾಬ್ ಮನೆಯ ಕಾವಲು ಕೆಲಸದಲ್ಲಿ ತೊಡಗಿದ್ದ.
ಶುಕ್ರವಾರ ನಸುಕಿನಲ್ಲಿ ತೋಸ್ನಿವಾಲ್ ಮನೆಗೆ ನುಗ್ಗಿದ್ದ ಮೂವರು ಗುಲಾಬ್ ಕುತ್ತಿಗೆಗೆ ಚಾಕುವಿನಿಂದ ಇರಿದು, ಗಾಯಗೊಳಿಸಿದ್ದಾರೆ. ಬಳಿಕ ಮನೆಯನ್ನು ದೋಚಿ ಪರಾರಿಯಾಗಿದ್ದಾರೆ.
ಮನೆಯಲ್ಲಿ ಕಳ್ಳತನ ಆಗಿರುವ ವಸ್ತುಗಳು, ಮೌಲ್ಯದ ಕುರಿತು ಮನೆಯ ಮಾಲೀಕರು ಬಂದು ಪರಿಶೀಲಿಸಿದಾಗಲೇ ನಿಖರ ಮಾಹಿತಿ ಲಭ್ಯವಾಗಲಿದೆ.
ಸುದ್ದಿ ತಿಳಿಯುತ್ತಲೇ ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.