Advertisement

ಜ್ಞಾನಯೋಗಾಶ್ರಮದಲ್ಲಿ ಗುರುವಿನ ಸ್ಮರಣೆ

10:26 AM Jul 17, 2019 | Naveen |

ವಿಜಯಪುರ: ನಗರದಲ್ಲಿರುವ ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ನಿಮಿತ್ತ ಶಿಷ್ಯರು ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಕರ್ತೃ ಗದ್ದುಗೆಗೆ ಸಿದ್ದೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ಭಕ್ತಿಪೂರ್ವಕ ವಿಶೇಷ ಪೂಜೆ ಸಲ್ಲಿಸಿ ಗುರು ಪೂರ್ಣಿಮೆ ಆಚರಿಸಿದರು.

Advertisement

ಮಂಗಳವಾರ ಸೂರ್ಯೋದಯಕ್ಕೆ ಮುನ್ನವೇ ಭಕ್ತರ ದಂಡು ಜ್ಞಾನಯೋಗಾಶ್ರಮದತ್ತ ಹೆಜ್ಜೆ ಹಾಕಿತ್ತು. ಬೆಳಗ್ಗೆ 4ಕ್ಕೆ ಆರಂಭವಾದ ಗುರು ಪೂರ್ಣಿಮೆ ಮಹೋತ್ಸವದಲ್ಲಿ ಜಪಯಜ್ಞ ನಡೆಯಿತು. ನಂತರ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನದ ಧ್ವನಿ ಸುರುಳಿ ಪ್ರಸಾರ ಮಾಡಲಾಯಿತು. ಬೆಳಗ್ಗೆ 7ಕ್ಕೆ ಆಶ್ರಮದ ಆವರಣದಲ್ಲಿರುವ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಪವಿತ್ರ ಗದ್ದುಗೆಗೆ ವಿಶೇಷ ಪೂಜೆ ಜರುಗಿತು.

ಈ ವೇಳೆಗೆ ಇಡಿ ಜ್ಞಾನಯೋಗಾಶ್ರಮದ ಆವರಣ ಕಿಕ್ಕಿರಿದು ತುಂಬಿದ್ದ ಭಕ್ತರು, ಮಲ್ಲಿಕಾರ್ಜುನ ಶ್ರೀಗಳ ಕರ್ತೃ ಗದ್ದುಗೆಗೆ ನಮನ ಸಲ್ಲಿಸಿದ ಭಕ್ತರು, ಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ವಿಜಯಪುರ ಮಾತ್ರವಲ್ಲದೇ ನೆರೆಯ ಬಾಗಲಕೋಟೆ, ಕಲಬುರಗಿ, ಬೀದರ, ಬೆಳಗಾವಿ, ಕೊಪ್ಪಳ, ರಾಯಚೂರು, ಗದಗ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರದ ಜಿಲ್ಲೆಯ ಸೋಲ್ಲಾಪುರ, ಸಾಂಗಲಿ ಜಿಲ್ಲೆಗಳಿಂದ ವಿವಿಧ ಮಠಾಧಿಧೀಶರು, ಸಾವಿರಾರು ಭಕ್ತರು ಆಶ್ರಮಕ್ಕೆ ಆಗಮಿಸಿ ಸಾಮೂಹಿಕ ಭಜನೆ, ಗುರು ಸ್ಮರಣೆ ಮೂಲಕ ಭಕ್ತಿ ಸಮರ್ಪಿಸಿದರು.

ಆಶ್ರಮಕ್ಕೆ ಭೇಟಿ ನೀಡಿದ್ದ ಭಕ್ತರೆಲ್ಲರೂ ದಾಸೋಹದಲ್ಲಿ ಸಜ್ಜಕ, ಅನ್ನ-ಸಾಂಬಾರು ಪ್ರಸಾದ ಸವಿದರು. ವಿದ್ಯಾರ್ಥಿಗಳು, ಸಂಘ-ಸಂಸ್ಥೆಯವರು, ಯುವಕ ಸಂಘದವರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿ ಎಲ್ಲಿಯೂ ಗದ್ದಲ ಉಂಟಾಗದಂತೆ ನೋಡಿಕೊಂಡರು.

ಇದಲ್ಲದೇ ಗುರು ಪೂರ್ಣಿಮೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಲವು ಸಾಮಾಜಿಕ ಜಾಗೃತಿ ಸಂದೇಶ ಬಿತ್ತುವ ಕೆಲಸ ಮಾಡುತ್ತಿದ್ದರು. ಪ್ರಸಾದ ಹಾಗೂ ನೀರನ್ನು ವ್ಯರ್ಥ ಗೊಳಿಸದಂತೆ ಜನತೆಗೆ ಧ್ವನಿ ವರ್ಧಕದ ಮೂಲಕ ನಿರಂತರ ಸಂದೇಶ ಬಿತ್ತುತ್ತಿದ್ದರು. ನೀರು ಅಮೂಲ್ಯ ವಸ್ತು, ನೀರು ವ್ಯರ್ಥ ಮಾಡಬೇಡಿ, ಅನ್ನ ಶ್ರೇಷ್ಠ-ವ್ಯರ್ಥ ಮಾಡ ಮಾಡಿ ಎಂಬ ಸಂದೇಶ ಫಲಕಗಳನ್ನು ಗಿಡ ಮರಗಳ ಮೇಲೆ ರಾರಾಜಿಸುತ್ತಿದ್ದವು.

Advertisement

ಆಶ್ರಮದ ಸುತ್ತಲೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲಿ ನೋಡಿದರೂ ಭಕ್ತಾದಿಗಳ ದಂಡು ಕಂಡು ಬಂತು. ಚಿಕ್ಕ ಮಕ್ಕಳು ಉತ್ಸಾಹಭರಿತರಾಗಿ ಆಟಿಕೆ ಖರೀದಿಯಲ್ಲಿ ತೊಡಗಿರುವ ದೃಶ್ಯ ಗೋಚರಿಸಿತು.

ಗುರು ಪೂರ್ಣಿಮೆ ನಿಮಿತ್ತ ಜ್ಞಾನಯೋಗಾಶ್ರಮಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ನಿತ್ಯ ಓಡಾಡುವ ಬಸ್‌ಗಳು ಮಾತ್ರವಲ್ಲದೇ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಿಂದ ಮಹಾತ್ಮ ಗಾಂಧಿಧೀಜಿ ವೃತ್ತದಿಂದ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಾಗಿತ್ತು. ಆಶ್ರಮದ ಸುತ್ತಮುತ್ತ ವಾಹನ ದಟ್ಟಣೆ ಕಡಿಮೆ ಮಾಡಲು ಸುಮಾರು ದೂರದಲ್ಲೇ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next