ವಿಜಯಪುರ : ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ಸರಿಯಾದ ಸಮಯದಲ್ಲಿ ತೀರಿಸಲಾಗದ ನೋವಿನಿಂದ ಜಿಲ್ಲೆಯ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಸಿಂದಗಿ ತಾಲ್ಲೂಕಿನ ಯರಗಲ್ಲ ಬಿ.ಕೆ. ಗ್ರಾಮದ ಮಲಕಪ್ಪ ಜಟ್ಟೆಪ್ಪ ಬಾಲಪ್ಪಗೋಳ ಎಂಬ 45 ವರ್ಷದ ರೈತ ಆತ್ಮಹತ್ಯೆ ಮಾಡಿಕೊಂಡವರು.
ಸಾಲಬಾಧೆ ತಾಳದೇ ಶನಿವಾರ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಂಕಟ ತಾಳಲಾರದೆ ಹೊರಳಾಡುವುದನ್ನು ಕಂಡ ಅಕ್ಕಪಕ್ಕದವರು ಕೂಡಲೇ ಅವರನ್ನು ಸಿಂದಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಮುಂದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
1-37 ಎಕರೆ ಜಮೀನು ಹೊಂದಿದ್ದ ಮಲಕಪ್ಪ, ಹೊಲದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ಗ್ರಾಮದ ಕೆವಿಜಿ ಬ್ಯಾಂಕ್‌ನಲ್ಲಿ 1 ಲಕ್ಷ ರೂ., ಹಾಗೂ ಖಾಸಗಿಯಾಗಿ 3 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ವಿಜಯಪುರ ಭಾರಿ ಮಳೆಗೆ ಮನೆ ಕುಸಿದು ಬಾಲಕಿ ಸಾವು: ಕೃಷ್ಣಾ ನದಿಯಲ್ಲಿ ತೇಲಿಬಂತು ವ್ಯಕ್ತಿಯ ಶವ
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ರೈತರು ಬೆಳೆದ ಬೆಳೆಗಳೆಲ್ಲಾ ಪ್ರವಾಹದ ಪಾಲಾಗುತ್ತಿದೆ ಇದರಿಂದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಬೆಳೆದ ಫಸಲುಗಳು ಕೈಗೆ ಸಿಗುವ ಮೊದಲೇ ಮಳೆಗೆ ಕೊಚ್ಚಿ ಹೋದರೆ ಸಾಲ ಮಾಡಿರುವ ರೈತರು ಸಾಲ ತೀರಿಸುವುದಾದರೂ ಹೇಗೆ ಎಂಬಂತಾಗಿದೆ.
ಈ ಕುರಿತು ಸಿಂದಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ..