ವಿಜಯಪುರ: ಕಳ್ಳತನ ಆರೋಪದಲ್ಲಿ ವಿಜಯಪುರ ನಗರದಲ್ಲಿ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಪಿಸ್ತೂಲ್ ತೋರಿಸಿ ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ತಾಮ್ರದ ವೈರ್ ಕಳ್ಳತನ ಆರೋಪದಲ್ಲಿ ಅವಿನಾಶ ಮಚ್ಚಾಳೆ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದ.
ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಅವಿನಾಶ ವಿಜಯಪುರ ನಗರದಲ್ಲಿ ತಲೆ ಮರೆಸಿಕೊಂಡಿರುವ ಖಚಿತ ಮಾಹಿತಿ ಹುಬ್ಬಳ್ಳಿ ಪೊಲೀಸರಿಗೆ ದೊರೆತಿತ್ತು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಆರೋಪಿ ಇರುವ ಸ್ಥಳದ ಖಚಿತ ಮಾಹಿತಿ ಆಧಿರಿಸಿ ಹುಬ್ಬಳ್ಳಿ ಪೊಲೀಸರು ಮಫ್ತಿಯಲ್ಲಿ ವಿಜಯಪುರ ನಗರಕ್ಕೆ ಆಗಮಿಸಿದ್ದರು.
ಮಫ್ತಿಯಲ್ಲಿದ್ದ ಹುಬ್ಬಳ್ಳಿ ಪೊಲೀಸರು ಅವಿನಾಶ ಬಂಧನಕ್ಕೆ ಮುಂದಾಗುತ್ತಲೇ ಆತನ ಕುಟುಂಬದ ಸದಸ್ಯರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ನಗರದ ಜಿಲ್ಲಾಧಿಕಾರಿ ನಿವಾಸದ ಎದುರು ಶುಕ್ರವಾರ ಮಧ್ಯಾಹ್ನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಈ ಘಟನೆ ಜರುಗಿದ್ದು, ಇದೀಗ ಬಯಲಾಗಿದೆ. ಆರೋಪಿಯನ್ನು ಸುತ್ತುವರೆದ ಹುಬ್ಬಳ್ಳಿ ಪೊಲೀಸರು ವಾಹನಕ್ಕೆ ಹತ್ತಿಸುವಾಗ ಕುಟುಂಬದ ಸದಸ್ಯರು ಪೊಲೀಸರ ಮೇಲೆ ಹಲ್ಲೆ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಂತದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆತ್ಮರಕ್ಷಣೆಗಾಗಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಎಎಸೈ ಹೊನ್ನಪ್ಪನವರ ಪಿಸ್ತೂಲ್ ಹೊರ ತೆಗೆಯುತ್ತಲೇ ಆರೋಪಿ ವಾಹನ ಏರಿದ್ದಾನೆ. ಆಕ್ಷೇಪಕ್ಕೆ ಮುಂದಾದವರು ಹಿಂದೆ ಸರಿದಿದ್ದಾರೆ.
ಕೂಡಲೇ ಸೆರೆ ಸಿಕ್ಕ ಆರೋಪಿ ಅವಿನಾಶನನ್ನು ವಾಹನದಲ್ಲಿ ಕರೆದೊಯ್ದು ಹುಬ್ಬಳ್ಳಿ ಪೊಲೀಸರು ನಗರದ ಗೋಲಗುಂಬಜ ಠಾಣೆಗೆ ತೆರಳಿ ತಮ್ಮ ವಿಳಾಸ, ಗುರುತು ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ತೋರಿಸಿದ್ದಾರೆ.
ಬಳಿಕ ಆರೋಪಿ ಅವಿನಾಶನನ್ನು ಹುಬ್ಬಳ್ಳಿಗೆ ಕರೆದೊಯ್ದಿದ್ದು, ಇಂದು ಸಂಬಂಧಿಸಿದ ನ್ಯಾಯಾಲಯಕ್ಕೆ ಹಾಜರಪಡಿಸುವ ಸಾಧ್ಯತೆಯಿದೆ.