Advertisement

ಉದ್ಯೋಗ ಖಾತ್ರಿಗೂ ಲಾಕ್‌ಡೌನ್‌ ಬಿಸಿ!

05:07 PM May 02, 2020 | Naveen |

ವಿಜಯಪುರ: ವಿಶ್ವವನ್ನು ದಂಗು ಬಡಿಸಿ ಜಗತ್ತನ್ನೇ ಕಟ್ಟಿ ಹಾಕಿರುವ ಕೋವಿಡ್‌-19 ಕೋವಿಡ್ ಲಾಕ್‌ಡೌನ್‌ ಗ್ರಾಮೀಣ ಭಾರತವನ್ನು ಹೈರಾಣಾಗಿಸಿದೆ. ಹಳ್ಳಿಗಳ ಕೂಲಿ ಕಾರ್ಮಿಕರ ಗುಳೆ ತಪ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉದ್ಯೋಗ ಖಾತ್ರಿ ಯೋಜನೆಗೂ ಲಾಕ್‌ಡೌನ್‌ ಬಿಸಿ ತಟ್ಟಿದೆ. ಪರಿಣಾಮ ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ತಿಂಗಳಲ್ಲಿ ನರೇಗಾದಡಿ ಶೇ.30ರಷ್ಟು ಗುರಿ ಸಾಧನೆಯೂ ಸಾಧ್ಯವಾಗಿಲ್ಲ ಎಂಬುದೇ ಇದಕ್ಕೆ ಸಾಕ್ಷಿ.

Advertisement

ವಿಜಯಪುರ ಜಿಲ್ಲೆಯಲ್ಲಿ 213 ಗ್ರಾಮ ಪಂಚಾಯಿತಿಗಳಿದ್ದು, ಏಪ್ರಿಲ್‌ ತಿಂಗಳಲ್ಲಿ 2.90 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಮಾರ್ಚ್‌ 22ರಂದು ಜನತಾ ಕರ್ಫ್ಯೂ ಹಾಗೂ ಮಾ.24ರಿಂದ ದೇಶಾದ್ಯಂತ ಜಾರಿಗೊಂಡ ಲಾಕ್‌ಡೌನ್‌ ಹಳ್ಳಿಗಳ ಕೃಷಿ ಕಾರ್ಮಿಕರ ಉದ್ಯೋಗಕ್ಕೂ ಕುತ್ತು ತಂದಿದೆ. ಒಂದೆಡೆ ಲಾಕ್‌ಡೌನ್‌ನ ಕಟ್ಟುನಿಟ್ಟಿನ ಕ್ರಮಗಳು ಜನರನ್ನು ಮನೆಯಿಂದ ಹೊರ ಬರದಂತೆ ತಡೆದಿವೆ. ನಂತರ ಸರ್ಕಾರ ಕೃಷಿ ಆಧಾರಿತ ಕಾರ್ಯ ಚಟುವಟಿಕೆಗೆ ನಿರ್ಬಂಧ ಸಡಿಲಿಸಿತ್ತು. ಆದರೂ ರೋಗ ತೀವ್ರತೆಯ ಭೀತಿಯಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದರು. ಪರಿಣಾಮ ಏಪ್ರಿಲ್‌ 1 ರಿಂದ ಆರಂಭಗೊಳ್ಳಬೇಕಿದ್ದ ನರೇಗಾ ಯೋಜನೆ ಕಾಮಗಾರಿಗಳು ಆರಂಭಗೊಳ್ಳಲೇ ಇಲ್ಲ. ನಂತರ ಸರ್ಕಾರದ ಮಾರ್ಗಸೂಚಿಗಳು, ಕೊರೊನಾ ಸೋಂಕು ಹರಡದಂತೆ ತಡೆಯಲು ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಮೂಲಕ ಜನ ಜಾಗೃತಿ ಮೂಡಿಸಲು ಮುಂದಾದವು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧಾರಣೆ ಹಾಗೂ ಸ್ಯಾನಿಟೈಸರ್‌ ಬಳಕೆ ಕಡ್ಡಾಯದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಿದವು. ಹೀಗಾಗಿ ಏಪ್ರಿಲ್‌ 15ರಿಂದ ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೆಲಸಗಳು ಆರಂಭಗೊಂಡವು.

ಲಾಕ್‌ಡೌನ್‌ನ ಈ ಹಂತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕಾರಣಕ್ಕೆ ವಿಜಯಪುರ ಜಿಪಂ ಸಿಇಒ ಆದೇಶದಂತೆ ರೈತರು ವ್ಯಕ್ತಿಗತವಾಗಿ ಹೊಲಗಳ ಬದುವು ಹಾಕುವುದು, ಕೃಷಿ ಹೊಂಡ ನಿರ್ಮಾಣದಂಥ ಕಾಮಗಾರಿಳಿಗೆ ಆದ್ಯತೆ ನೀಡಿದ್ದಾರೆ. 5ಕ್ಕಿಂತ ಹೆಚ್ಚು ಕಾರ್ಮಿಕರು ಲಭ್ಯವಾದಲ್ಲಿ ಪ್ರತ್ಯೇಕ ಗುಂಪುಗಳನ್ನು ಮಾಡಿ ಕೆರೆಗಳ ಹೂಳೆತ್ತುವುದು, ಹಳ್ಳಗಳಲ್ಲಿ ಮುಳ್ಳುಕಂಟಿ ಕತ್ತರಿಸುವುದು, ಬಾಂದಾರ ನಿರ್ಮಾಣದಂಥ ಕಾಮಗಾರಿಗಳನ್ನು ಮಾಡಲು ಮುಂದಾಗಿದೆ.

ಏಪ್ರಿಲ್‌ ಎರಡು-ಮೂರನೇ ವಾರದಿಂದ ಜಿಲ್ಲೆಯ 14 ಗ್ರಾಪಂ ಹೊರತುಪಡಿಸಿ ಉಳಿದ ಎಲ್ಲ ಗ್ರಾಮ ಪಂಚಾಯತಿಗಳ ಸುಮಾರು 600 ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳು ಆರಂಭಗೊಂಡಿದ್ದು, 745 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಈವರೆಗೆ 9,979 ಕಾರ್ಮಿಕರಿಂದ 1 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಗ್ರಾಮೀಣ ಉದ್ಯೋಗ
ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸುಮಾರು 37 ಲಕ್ಷ ರೂ. ಕೂಲಿ ಹಣ ಪಾವತಿಸಲು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ ಲಾಕ್‌ಡೌನ್‌ ಬಳಿಕ ಹಳ್ಳಿಗಳಲ್ಲಿ ಕೃಷಿಕರು ಹಾಗೂ ಕಾರ್ಮಿಕರು ಉದ್ಯೋಗ ಇಲ್ಲದೇ ಸಮಸ್ಯೆಗೆ ಸಿಲುಕಿದ್ದರು. ಸರ್ಕಾರದ ನಿರ್ದೇಶನದಂತೆ ಕೃಷಿ ಚಟುವಟಿಕೆಗೆ ನಿಯಮ ಸಡಿಸಿಲಿಸಿದರೂ ಕೊರೊನಾ ರೋಗದ ಸೋಂಕು ಹರಡುವಿಕೆ ಭೀತಿಯಿಂದ ಜನರು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬರಲಿಲ್ಲ. ಜಾಗೃತಿ ಬಳಿಕ ಕಳೆದ 15 ದಿನಗಳಿಂದ ಕೆಲಸ ಆರಂಭಗೊಂಡಿವೆ.
ಗೋವಿಂದರೆಡ್ಡಿ, ಜಿಪಂ ಸಿಇಒ,

ವಿಜಯಪುರ ಜಿಲ್ಲೆ ಲಾಕ್‌ಡೌನ್‌ ಬಳಿಕ ಸರ್ಕಾರದ ಎಲ್ಲ ನಿರ್ಮಾಣ ಯೋಜನೆಗಳ ಕಾಮಗಾರಿಗಳು ಸ್ಥಗಿತಗೊಂಡಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಅನುಸರಿಸಿ ಕೆಲಸ ಆರಂಭಿಸಲು ಯೋಜಿಸಿದ್ದೆವು. ಆದರೆ ಜಿಲ್ಲೆ ರೆಡ್‌ಜೋನ್‌ ವ್ಯಾಪ್ತಿಯಲ್ಲಿರುವ ಕಾರಣ ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರದ ಯಾವುದೇ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸುತ್ತಿಲ್ಲ.
ವೈ.ಎಸ್‌.ಪಾಟೀಲ, ಜಿಲ್ಲಾಧಿಕಾರಿ

Advertisement

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next