Advertisement

ಡೆಂಘೀ ನಿಯಂತ್ರಣಕ್ಕೆ ತಾಕೀತು

05:56 PM Dec 11, 2019 | Naveen |

ವಿಜಯಪುರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಘೀ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಾದ್ಯಂತ ಡೆಂಘೀ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಡೆಂಘೀ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವ ಪ್ರದೇಶಗಳಲ್ಲಿ ಪರಿಣಾಮಕಾರಿ ಜಾಗೃತಿ ಹಮ್ಮಿಕೊಳ್ಳಬೇಕು. ಇದಕ್ಕಾಗಿ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಾಯ ಸಹಕಾರ ಪಡೆಯಬೇಕು. ಡೆಂಘೀ ಉಲ್ಬಣ ಸ್ಥಳಗಳಲ್ಲಿ ಮನೆ ಮನೆಗೆ ಫಾಗಿಂಗ್‌ ಹಾಗೂ ಸ್ವಚ್ಛತಾ ಕಾರ್ಯ, ಪ್ರತಿ ಮನೆ-ಮನೆ ಹಾಗೂ ಸಮೂಹ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ರೋಗಕಾರಕ ಸೊಳ್ಳೆಗಳ ನಿಗ್ರಹಕ್ಕೆ ಫಾಗಿಂಗ್‌ ಕಾರ್ಯ ಚುರುಕುಗೊಳಿಸಲು ಕೂಡಲೇ ಮಹಾನಗರ ಪಾಲಿಕೆಯಲ್ಲಿರುವ 14 ಫಾಗಿಂಗ್‌ ಮಶೀನ್‌ಗಳನ್ನು ತಕ್ಷಣ ದುರಸ್ತಿಗೊಳಿಸಬೇಕು. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಫಾಗಿಂಗ್‌ ಜೊತೆಗೆ ಜನರಲ್ಲಿ ಅಗತ್ಯ ಜಾಗೃತಿ ಮೂಡಿಸಬೇಕು. ರೋಗಕಾರಕ ಪರಿಸ್ಥಿತಿಯಲ್ಲಿ ಸಂಗ್ರಹವಾಗಿರುವ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಲಾರ್ವಾ
ಮೀನು ಬಿಡಬೇಕು. ಈ ಕುರಿತು ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.

ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತಜ್ಞರ, ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆ ಅಧಿ ಕಾರಿಗಳ ಸಮಿತಿ ರಚಿಸಿ ಸಮನ್ವಯದಿಂದ ಕೆಲಸ ಮಾಡಬೇಕು. ನಿತ್ಯವೂ ಕೈಗೊಂಡ ಕ್ರಮಗಳ, ವಿಶೇಷವಾಗಿ ಫಲಿತಾಂಶ ಆಧಾರಿತ ವರದಿ ನೀಡಬೇಕು. ಕ್ಷೇತ್ರ ಮಟ್ಟದಲ್ಲಿ ಕೈಗೊಂಡ ಕ್ರಮಗಳ ಆಧಾರದ ಮೇಲೆ ಡೆಂಘೀ ಪ್ರಕರಣ ಸಂಖ್ಯೆ ತಗ್ಗಿಸಲು ವಿಶೇಷ ಜಾಗೃತಿ ಕ್ರಮ ಕೈಗೊಂಡು, ನಂತರ ಫಲಿತಾಂಶದ ಕುರಿತು ಸಮಿತಿ ರಚಿಸಿ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು,

ಡಾ| ಮಹೇಂದ್ರ ಕಾಪ್ಸೆ, ಡಾ| ಶರಣಪ್ಪ ಕಟ್ಟಿ, ಡಾ| ರಾಜೇಶ್ವರಿ ಗೊಲಗೇರಿ, ಡಾ| ಮಹೇಶ ನಾಗರಬೆಟ್ಟ, ಡಾ| ಜೈಬುನ್ನೀಸಾ ಬೀಳಗಿ, ಡಾ| ಸಂಪತ್‌ ಗುಣಾರಿ, ಡಾ| ಎಂ.ಬಿ. ಬಿರಾದಾರ, ಡಾ| ಮುಕುಂದ ಗಲಗಲಿ, ಡಾ| ಐ.ಎಸ್‌. ಧಾರವಾಡಕರ, ಡಾ| ಚನ್ನಮ್ಮ ಕಟ್ಟಿ, ಡಾ| ಪ್ರಕಾಶ ಗೋಟಖಂಡ್ಕಿ , ಡಾ| ಸಂತೋಷ ನಂದಿ, ಡಾ| ಉಪಾಸೆ, ಡಾ| ಸೂಚೆತಾ ಆಕಾಶ ಸೇರಿದಂತೆ ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next