ವಿಜಯಪುರ: ಜಿಲ್ಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಖಾಸಗಿ ಆಸ್ಪತ್ರೆಗಳು ಸೇವೆ ಆರಂಭಿಸಬೇಕು. ಜಿಲ್ಲಾಡಳಿತದ ಈ ನಿರ್ದೇಶನ ನಿರ್ಲಕ್ಷಿಸಿದಲ್ಲಿ ಖಾಸಗಿ ಆಸ್ಪತ್ರೆಗಳ ನೋಂದಣಿ ರದ್ದುಗೊಳಿಸುವುದಾಗಿ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಎಚ್ಚರಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಜಿಲ್ಲಾದ್ಯಂತ ಸೇವೆ ಆರಂಭಿಸಿರುವ ಖಾಸಗಿ ಆಸ್ಪತ್ರೆ ಹೊರತುಪಡಿಸಿ ಸೇವೆ ನೀಡದ ಖಾಸಗಿ ಆಸ್ಪತ್ರೆಗಳು ತಕ್ಷಣ ಸೇವೆ ಆರಂಭಿಸಬೇಕು. ಸಾರ್ವಜನಿಕರಿಂದ ದೂರು ಬಂದಲ್ಲಿ ಸಂಬಂಧಿಸಿದ ಆಸ್ಪತ್ರೆಗಳ ನೋಂದಣಿ ರದ್ದು ಮಾಡುವುದಾಗಿ ಎಚ್ಚರಿಸಿದರು.
ಜಿಲ್ಲೆಯಲ್ಲಿ 229 ಆಯುರ್ವೇದಿಕ್ ಕ್ಲಿನಿಕ್-ನರ್ಸಿಂಗ್, 5 ಯುನಾನಿ, 29 ಹೋಮಿಯೋಪಥಿಕ್, 230 ಆಲೋಪಥಿಕ್ ಮತ್ತು 38 ಡೈಗ್ನೊàಸ್ಟಿಕ್ ಆಸ್ಪತ್ರೆಗಳಿವೆ. ಈ ಆರೋಗ್ಯ ಕೇಂದ್ರಗಳಲ್ಲಿ ಶ್ವಾಸಕೋಶ ತೊಂದರೆ, ನೆಗಡಿ, ಕೆಮ್ಮು, ಜ್ವರ ರೋಗಿಗಳು ಕಂಡು ಬಂದಲ್ಲಿ ಚಿಕಿತ್ಸೆ ನೀಡದೇ ತಕ್ಷಣ ತಜ್ಞ ವೈದ್ಯರ ಬಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕು. ಅಲ್ಲದೇ ರೋಗಿ ತಜ್ಞ ವೈದ್ಯರ ಆಸ್ಪತ್ರೆಗೆ ತಲುಪಿದ ಬಗ್ಗೆ ಖಾತ್ರಿಪಡಿಸಿಕೊಂಡು ತಾಲೂಕು ಆರೋಗ್ಯಾಧಿ ಕಾರಿ ಹಾಗೂ ಐಎಂಎ ಅಧ್ಯಕ್ಷರಿಗೆ ಮಾಹಿತಿ ನೀಡಬೇಕು. ಪ್ರಾಥಮಿಕ ಪರೀಕ್ಷೆ ನಡೆಸಿದ ಹಾಗೂ ತಜ್ಞ ವೈದ್ಯರು ರೋಗಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ವೈದ್ಯರು ತಮ್ಮ ತಜ್ಞತೆಗೆ ತಕ್ಕಂತೆ ಚಿಕಿತ್ಸೆ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಘೋಷಿಸಿ ರುವ ಕಂಟೇನ್ಮೆಂಟ್ ವಲಯದಲ್ಲಿ ಯಾವುದೇ ಆಸ್ಪತ್ರೆಗಳು ಐಪಿಡಿ, ಹೆರಿಗೆ, ಸರ್ಜರಿ ಕೈಗೊಳ್ಳುವಂತಿಲ್ಲ. ಕೇವಲ ಓಪಿಡಿ ಮಾತ್ರ ತೆರೆದು ಚಿಕಿತ್ಸೆ ನೀಡಬಹುದಾಗಿದೆ. ತುರ್ತು ಚಿಕಿತ್ಸಾ ಪ್ರಕರಣ ಇದ್ದಲ್ಲಿ ರೋಗಿಗಳನ್ನು ಇತರೆ ತಜ್ಞ ವೈದ್ಯರ ಬಳಿ ಕಳುಹಿಸಲು ಪೊಲೀಸ್ ಇಲಾಖೆ ನೆರವು ಪಡೆಯಬಹುದು.
ಗೋಲ್‌ಗುಂಬಜ್ ಸಿಪಿಐ ಬಿ.ಕೆ. ಮುಕರ್ತಿಹಾಳ ಮೊ.9480804232 ಸಂಪರ್ಕಿಸಿ ನೆರವು ಪಡೆಯುವಂತೆ ಸೂಚಿಸಿದರು. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ
ಸಾರ್ವಜನಿಕರಿಗೆ ಆರೋಗ್ಯ ಸೇವೆ ಕಲ್ಪಿಸಿ ಜಿಲ್ಲಾಡಳಿತದ ಜೊತೆ ಸಹಕರಿಸಬೇಕು. ಬಯೋಮೆಡಿಕಲ್ ವೇಸ್ಟ್ ನಿರ್ವಹಣೆಗೆ ಸಮನ್ವಯ ಸಾಧಿಸಲಾಗುವುದು. ಕೋವಿಡ್-19 ಹೊರತು ಪಡಿಸಿ ಇತರೇ ಸಾವು ಸಂಭವಿಸಿದಲ್ಲಿ, ಆಸ್ಪತ್ರೆಯಲ್ಲಿ ದೃಢೀಕರಣ ಇರಿಸಿಕೊಂಡು ರೋಗಿ ಸಂಬಂಧಿಗಳಿಗೆ ಪ್ರತಿ ನೀಡಬೇಕು ಎಂದರು. ಜಿಪಂ ಸಿಇಓ ಗೋವಿಂದರೆಡ್ಡಿ, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ಜಿಲ್ಲಾಸ್ಪತ್ರೆ ಸರ್ಜನ್ ಡಾ| ಶರಣಪ್ಪ ಕಟ್ಟಿ, ಡಾ| ಎಂ.ಬಿ.ಬಿರಾದಾರ ಇತರರು ಉಪಸ್ಥಿತರಿದ್ದರು.