ವಿಜಯಪುರ: ತಮ್ಮ ಕೆರೆಗಳಿಗೆ ಕಾಲುವೆ ಮೂಲಕ ನೀರು ತುಂಬಿಸುವಂತೆ ಆಗ್ರಹಿಸಿ ರೈತರು ರೈತರು ಎತ್ತುಗಳೊಂದಿಗೆ ಬರಿದಾದ ಕೆರೆಯಲ್ಲಿ ಸುಡುವ ಬಿಸಲನ್ನೂ ಲೆಕ್ಕಿಸದೆ ಪ್ರತಿಭಟನೆ ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಮುಖ ಏತ ನೀರಾವರಿಯಾಗಿರುವ ಚಿಮ್ಮಲಗಿ ಮುಖ್ಯ ಕಾಲುವೆ ಮೂಲಕ ತಮ್ಮ ಭಾಗದ ಕೆರೆಗಳಿಗೆ ನೀರು ಹರಿಸಬೇಕು. ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಕಾರಣ ಕೂಡಲೇ ಸರ್ಕಾರ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಕಡ್ಲೇವಾಡ ಗ್ರಾಮದಲ್ಲಿ ನೀರಿಲ್ಲದೆ ಬರಿದಾಗಿರುವ ಕೆರೆಯಲ್ಲಿ ಎತ್ತುಗಳೊಂದಿಗೆ ಧರಣಿ ಆರಂಭಿಸಿದ್ದಾರೆ.
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ, ಚಿಕ್ಕರೂಗಿ, ಕಡ್ಲೇವಾಡ ಸೇರಿದಂತೆ ವಿವಿಧ ಗ್ರಾಮಗಳ ರೈತರು ತಮ್ಮ ಜಾನುವಾರುಗಳೊಂದಿಗೆ ಆಗಮಿಸಿ ಕೆರೆಯಲ್ಲಿ ಧರಣಿ ಆರಂಭಿಸಿದ್ದಾರೆ.
ಚಿಮ್ಮಲಗಿ ಏತ ನೀರಾವರಿ ಯೋಜನೆ ನಾಗಠಾಣಾ ಸೇರಿದಂತೆ ವಿವಿಧ ಕಾಲುವೆ-ಉಪ ಕಾಲುವೆಗಳಿಗೆ ನೀರು ಹರಿಸಲು ಅಗ್ರಹಿಸಿ ಧರಣಿ ಆರಂಭಿಸಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮಧ್ಯಾಹ್ನದ ಬಿರು ಬಿಸಿಲನ್ನೂ ಲೆಕ್ಕಿಸದೆ ನೀರಿಲ್ಲದ ಕೆರೆಯಲ್ಲಿ ಧರಣಿ ಆರಂಭಿಸಿರುವ ರೈತರು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ. ಕೂಡಲೇ ಕಾಲುವೆಗಳಿಗೆ ನೀರು ಹರಿಸಿ ನಮ್ಮ ಭಾಗದ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.