ವಿಜಯಪುರ: ಮಹಾರಾಷ್ಟ್ರದ ಗಡಿನಾಡ ಕನ್ನಡಿಗರ ಮಕ್ಕಳು ಓದುತ್ತಿರುವ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಮಹಾರಾಷ್ಟ್ರ ಸರ್ಕಾರ ಕನ್ನಡದಲ್ಲಿ ನಲಿಕಲಿ ಪಠ್ಯಪುಸ್ತಕಗಳನ್ನು ಪೂರೈಸುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳಲು ಆಗ್ರಹಿಸಿ ಆ.26 ರಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದಾಗಿ ಎಂದು ಯುವ ವಿಕಾಸ ಸಂಗಮ ಸಂಘಟನೆ ತಿಳಿಸಿದೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಶ್ರೀಧರ ಬಿಜ್ಜರಗಿ, ಕೂಡಲೇ ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಗಡಿ ಭಾಗದ ಕನ್ನಡಿಗರ ಮಕ್ಕಳು ಶೈಕ್ಷಣಿಕ ಹಂತದಲ್ಲಿ ಎದುರಿಸುತ್ತಿರುವ ಕನ್ನಡ ಕಲಿಕಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಸರ್ಕಾರ ತನ್ನ ನೆಲದಲ್ಲಿರುವ ಕನ್ನಡ ಶಾಲೆಗಳಿಗೆ ಕನ್ನಡದಲ್ಲಿ ನಲಿಕಲಿ ಪಠ್ಯವನ್ನು ಪೂರೈಸದೆ ಮರಾಠಿ ಭಾಷೆಯಲ್ಲಿ ನಲಿಕಲಿ ಪಠ್ಯ ಪೂರೈಸುತ್ತಿದೆ. ಅಲ್ಲಿರುವ ಕನ್ನಡ ಶಿಕ್ಷಕರು ಮರಾಠಿಯಿಂದ ಕನ್ನಡಕ್ಕೆ ತರ್ಜುಮೆ ಮಾಡಿ ಕನ್ನಡ ಕಲಿಸುವ ದುಸ್ಥಿತಿ ಇದೆ. ಮಹಾರಾಷ್ಟ್ರ ಸರ್ಕಾರ ಕನ್ನಡ ಶಾಲೆಗಳ ವಿಷಯದಲ್ಲಿ ಮಲತಾಯಿ ಧೋರಣೇ ಅನುಸರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಮಕ್ಕಳು ಕನ್ನಡ ಪಠ್ಯ ಇಲ್ಲದೆ ಮರಾಠಿಯಲ್ಲಿ ಓದುವ ದುಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಸರ್ಕಾರ ಕೂಡಲೇ ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ನಲಿಕಲಿ ಪಠ್ಯ ಪೂರೈಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಇದಲ್ಲದೇ ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕ ಮಾಡದೆ ಮರಾಠಿ ಶಿಕ್ಷಕರನ್ನು ನೇಮಿಸುತ್ತಿರುವ ವಿಷಯ ಈಗಷ್ಟೇ ಬೆಳಕಿಗೆ ಬಂದಿದೆ. ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕದ ವಿಷಯದಲ್ಲೂ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಆಗ್ರಹಿಸಬೇಕು ಎಂದರು.
ಇದೇ ವಿಷಯವಾಗಿ ಆ.26 ರಂದು ವಿಜಯಪುರ ನಗರದಲ್ಲಿ ಪ್ರತಿಭಟನೆಯ ನಡೆಸಿ ಜಿಲ್ಲಾಡಳಿತದ ಮೂಲಕ ಎರಡೂ ರಾಜ್ಯಗಳ ಸರ್ಕಾರಗಳಿಗೆ ಮನವಿ ಮಾಡಲಿದ್ದೇವೆ. ಒಂದೊಮ್ಮೆ ನಿರ್ಲಕ್ಷಿಸಿದರೆ ಈ ಕುರಿತು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸಂಘಟನೆಯ ಪ್ರಮುಖರಾದ ಪ್ರಕಾಶ ಮೇಟಿ, ಪ್ರವೀಣ ಕುರ್ಲೆ, ಸಚಿನ್ ಗದ್ಯಾಳ, ರಾಜಕುಮಾರ ಘೌಂಡಿ ಇತರರು ಉಪಸ್ಥಿತರಿದ್ದರು.