ವಿಜಯಪುರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿದೇಶದಿಂದ ಈವರೆಗೆ 150 ಜನ ವಿಜಯಪುರ ಜಿಲ್ಲೆಗೆ ಮರಳಿದ್ದಾರೆ. ಇನ್ನೂ ಸುಮಾರು 40 ಜನರು ಸೌದಿ ಅರೇಬಿಯಾ ದೇಶದಿಂದ ಮರಳುತ್ತಿದ್ದಾರೆ. ಹೀಗಾಗಿ ವಿದೇಶದಿಂದ ಬರುವವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಕೊರೊನಾ ಸೋಂಕು ತಗುಲಿದ್ದು ಕಂಡುಬಂದರೆ ಐಸೋಲೇಶನ್ ವಿಶೇಷ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತದೆ. ಇಲ್ಲವಾದಲ್ಲಿ ಮನೆಯಲ್ಲಿ ಇರಿಸಿ, ಚಿಕಿತ್ಸೆ ಮೂಲಕ ನಿಗಾ ಇರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ಸೋಮವಾರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿದೇಶದಿಂದ ನಿನ್ನೆಯವರೆಗೆ ವಿಜಯಪುರ ಜಿಲ್ಲೆಗೆ 76 ಜನ ಆಗಮಿಸಿದ್ದು, ಇಂದು 74 ಜನ ಬಂದಿದ್ದಾರೆ. ವಿದೇಶದಿಂದ ಬಂದ 5 ಜನರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿದ್ದವು.
ಇವರ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು, ಅದರಲ್ಲಿ ನಾಲ್ವು ಜನರ ವರದಿ ನೆಗೆಟಿವ್ ಬಂದಿದೆ. ಒಬ್ಬರ ವರದಿ ಬರುವುದು ಬಾಕಿ ಇದೆ, ಇಂದು ಸಂಜೆ ಬರಬಹುದು ಎಂದರು.
ಇಂದು ಸೌದಿಯಿಂದ ಇನ್ನೂ 40 ಜನ ಖಾಸಗಿ ಬಸ್ ನಲ್ಲಿ ಜಿಲ್ಲೆಗೆ ಬರುತ್ತಿರುವ ಮಾಹಿತಿ ಇದೆ. ಹೀಗೆ ಬರುವವರನ್ನುಅವರನ್ನು ವಿಜಯಪುರ ನಗರದ ಹೊರಗಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಲಾಗುತ್ತದೆ.
ಕೊರೊನಾ ಲಕ್ಷಣ ಕಂಡುಬಂದಲ್ಲಿ ಕೂಡಲೇ ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗುವುದು, ಇಲ್ಲವಾದಲ್ಲಿ ಹೋಂ ಐಸೋಲೇಷನ್ ನಲ್ಲಿ ಇಡಲಾಗುವುದು ಎಂದು ವಿವರಿಸಿದರು.