Advertisement

Vijayapura: ಸ್ಮಾರಕ ವಿಕೃತಿಗೊಳಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಭೂಬಾಲನ್ ಎಚ್ಚರಿಕೆ

01:45 PM Sep 27, 2023 | Team Udayavani |

ವಿಜಯಪುರ: ಪಾರಂಪರಿಕ ಸ್ಮಾರಕಗಳನ್ನು ವಿಕೃತಿಗೊಳಿಸಿದರೆ ಗೂಂಡಾಗಳ ವಿರುದ್ಧ ಕೈಗೊಳ್ಳುವಂತೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಭೂಬಾಲನ್ ಎಚ್ಚರಿಸಿದರು.

Advertisement

ಬುಧವಾರ ನಗರದ ಐತಿಹಾಸಿಕ ಬೇಗಂ ತಲಾಬ್ ಸ್ಮಾರಕದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಖಂಡ ವಿಜಯಪುರ ಜಿಲ್ಲೆ ಪ್ರವಾಸಿಗರನ್ನು ಆಕರ್ಷಿಸುವ ದೊಡ್ಡ ಶಕ್ತಿ ಹೊಂದಿದೆ. ಆದರೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಜನರು ಮಾಲಿನ್ಯ ಸೃಷ್ಟಿಸುವ ವರ್ತನೆ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಿನ್ನಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಗಾಗಿ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಈಗಾಗಲೇ ಆನಂದಮಹಲ್ ಐದು ಕೋಟಿ ರೂ. ವೆಚ್ಚದಲ್ಲಿ ನವೀಕರಿಸುವ ಯೋಜನೆ ಅಂತಿಮ ಹಂತದಲ್ಲಿದ್ದು, ಸ್ಮಾರಕ ಸಂರಕ್ಷಣೆ, ಫೋಟೋ ಗ್ಯಾಲರಿ ಸ್ಥಾಪನೆಗೆ ಆದ್ಯತೆ ನೀಡುವಂತೆಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಪಾರಂಪರಿಕ ಸ್ನಾರಕಗಳ ಸಂರಕ್ಷಣೆ ಹಾಗೂ ಸ್ವಚ್ಚತಾ ಪರಿಸರ ನಿರ್ಮಿಸುವುದು ಜಿಲ್ಲೆಯ ಜನರ ಜವಾಬ್ದಾರಿ. ಸ್ವಚ್ಚತೆ ವಿಷಯದಲ್ಲಿ ಜಿಲ್ಲೆಯ ಜನರು ವಿಶೇಷ ಜಾಗೃತಿ ಅಗತ್ಯವಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಸಂರಕ್ಷಣೆ, ಸೌಂದರ್ಯೀಕರ ಕಾಯ್ದುಕೊಳ್ಳುವಲ್ಲಿ ಜಿಲ್ಲೆಯ ಜನರು ಜಿಲ್ಲಾಡಳಿತದ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆ ಪಾರಂಪರಿಕ, ಧಾರ್ಮಿಕ, ಆಧುನಿಕ ನಿರ್ಮಾಣಗಳ ಪ್ರವಾಸೋದ್ಯಮ ವಿಜಯಪುರ ತಾಲ್ಲೂಕಿನಲ್ಲಿ ಸಮೃದ್ಧವಾಗಿದೆ. ಪ್ರವಾಸೋದ್ಯಮ ಬಲವರ್ಧನೆಯಿಂದ ಜಿಲ್ಲೆಯ ಆರ್ಥಿಕ ಶಕ್ತಿ ವೃದ್ಧಿಸುವಲ್ಲಿ ಸಹಕಾರಿ ಆಗಲಿದೆ ಎಂದರು.

Advertisement

ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಭವಿಷ್ಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಿಜಯಪುರ ಮಾರ್ಗವಾಗಿ ಹೆಚ್ಚಿನ ರೈಲು ಸೇವೆಗಳು, ರಾಜ್ಯದ ಹಾಗೂ ಹೊರ ರಾಜ್ಯದ ಪ್ರಮುಖ ನಗರಗಳಿಂದ ರಸ್ತೆ ಸಾರಿಗೆ ಸೇವೆಗಳು ಲಭ್ಯವಿದೆ. ಆದರೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಜಯಪುರ ಜಿಲ್ಲೆ ಸೋಲುತ್ತಿರುವುದು ನೋವಿನ ಸಂಗತಿ ಎಂದರು.

ವಿಶೇಷ ಉಪನ್ಯಾಸ ನೀಡಿದ ವಿಕ್ರಮ ಬೆಳಂಕಿ, ದೇಶದ ಆದಾಯ ತರುವಲ್ಲಿ ಪ್ರವಾಸೋದ್ಯಮ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಪಾರಂಪರಿಕ, ಸಾಹಸ, ಪ್ರಕೃತಿ ಪ್ರವಾಸೋದ್ಯನದ ಜೊತೆಗೆ ಈಚೆಗೆ ಕೃಷಿ ಪ್ರವಾಸೋದ್ಯಮ, ಆಯುರ್ವೇದಿಕ್ ಚಿಕಿತ್ಸಾ ಪ್ರವಾಸೋದ್ಯಮ ಹೀಗೆ ಆಧುನಿಕ ಪರಿಕಲ್ಪನೆಯ ಪ್ರವಾಸೋದ್ಯಮ ಬಲವರ್ಧನೆ ವಿಷಯದಲ್ಲಿ ಯುವ ಸಮೂಹ ಚಿತ್ತ ನೆಡಬೇಕಿದೆ ಎಂದರು.

ಇಗ್ನೋ ಪ್ರಾದೇಶಿಕ ನಿರ್ದೇಶಕ ವರದರಾಜನ್, ಪೀಟರ್ ಅಲೆಗ್ಸಾಂಡರ್, ಸಣ್ಣ ನೀರಾವರಿ ಇಲಾಖೆಯ ವಿ.ಸಿ.ವಸ್ತ್ರದ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ವಿಕ್ರಮ ಬೆಳಂಕಿ, ಆರ್.ಕೆ.ಎಂ. ಕಾಲೇಜು ಮುಖ್ಯಸ್ಥ ಶಂಭುಲಿಂಗ ಕರ್ಪುರಮಠ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಎ.ಎಸ್.ಐ. ಪ್ರಸನ್ನ, ವಿಜಯ ಇತರರು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಹುಮಾಯುನ್ ಮಮದಾಪುರ ನಿರೂಪಿಸಿದರು. ಪ್ರವಾಸೋದ್ಯಮ ಇಲಾಖೆ ತುಕಾರಾಮ ಪವಾರ ವಂದಿಸಿದರು.

ಇದನ್ನೂ ಓದಿ: Ramanagara: ಚುನಾವಣಾಧಿಕಾರಿಗಳ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು

Advertisement

Udayavani is now on Telegram. Click here to join our channel and stay updated with the latest news.

Next