Advertisement

Black And White ಮನಿ ದಂಧೆ: 20 ಲಕ್ಷ ರೂ. ವಂಚನೆ, ಬೆಳಗಾವಿ ಮಹಿಳೆ ಸೇರಿ ನಾಲ್ವರ ಬಂಧನ

07:36 PM Sep 05, 2023 | Team Udayavani |
ವಿಜಯಪುರ: ಬ್ಲ್ಯಾಕ್ ಆ್ಯಂಡ್ ವೈಟ್ ಹಣದ ದಂಧೆಯಲ್ಲಿ ವಿಜಯಪುರ ಜಿಲ್ಲೆಯ ವ್ಯಕ್ತಿಗೆ 20 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಇಡೀ ಪ್ರಕರಣ ವಿವರ ನೀಡಿದ ಎಸ್ಪಿ ಆನಂದಕುಮಾರ, ಕಪ್ಪುಹಣವನ್ನು ಬಿಳಿಯಾಗಿ ಮಾಡಿಕೊಡುವ ದಂಧೆಯ ಹೆಸರಿನಲ್ಲಿ ವಂಚನೆಗೊಳಗಾದ ವ್ಯಕ್ತಿ ಬಬಲೇಶ್ವರ ಮೂಲದ ಚಂದ್ರಶೇಖರ ಬಸಪ್ಪ ಕನ್ನೂರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು ಎಂದರು.

Advertisement

ಬಂಧಿತ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಗೋಗಾಕ ತಾಲೂಕಿನ ಸಂಗಣಕೇರಿ ಗ್ರಾಮದ ಮಹಿಳೆ ಲಕ್ಷ್ಮೀ ರಾಮಪ್ಪ ಕಂಕಣವಾಡಿ (22), ಬೈಲಹೊಂಗಲ ತಾಲೂಕಿನ ಕೊಳದೂರಿನ ಈರಣ್ಣ ರುದ್ರಪ್ಪ ಕೌಜಲಗಿ (46), ಹಲಗಾ ಬಸ್ತಿಗಲ್ಲಿಯ ಅಪ್ಪಾಸಾಹೇಬ್ ಬಾಬು ಇಂಚಲ್ (66) ಹಾಗೂ ಚಿಕ್ಕೋಡಿ ಮಾತಂಗಿಕೇರಿಯ ಸುನೀಲ ಕಾಶಿನಾಥ ದೊಡಮನಿ (37) ಎಂದು ಗುರುತಿಸಲಾಗಿದೆ.

20 ಲಕ್ಷ ರೂ. ನೀಡಿದರೆ 1 ಕೋಟಿ ರೂ. ನಗದು ಹಣವನ್ನು ನೀಡುವುದಾಗಿ ಹೇಳಿ ಚಂದ್ರಶೇಖರ ಅವರಿಂದ 20 ಲಕ್ಷ ರೂ. ಪಡೆದಿದ್ದರು. ಬಳಿಕ ಬಂಡಲ್‍ನಲ್ಲಿ ಮೇಲೆ ಮೇಲೆ ಮಾತ್ರ ಒಂದು ಸುತ್ತು ಅಸಲಿ ನೋಟುಗಳ್ನು ಇರಿಸಿ, ಉಳಿದಂತೆ ಖಾಲಿ ಪೇಪರ್, ನೋಟ್‍ಬುಕ್ ಹಾಕಿ ರಟ್ಟಿನ ಡಬ್ಬದಲ್ಲಿ ಪ್ಯಾಕ್ ಮಾಡಿ ನೀಡಿದ್ದರು.

ತಾವು ವಂಚನೆಗೊಳಗಾದ ವಿಷಯ ತಿಳಿಯುತ್ತಲೇ ಚಂದ್ರಶೇಖರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇನ್ಸ್‍ಪೆಕ್ಟರ್ ರಮೇಶ ಅವಜಿ ನೇತೃತ್ವದ ತನಿಖಾ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.

ಬಂಧಿತರಿಂದ 19 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ 9 ಮೊಬೈಲ್, 10 ಸಿಮ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಇಡೀ ಪ್ರಕರಣವನ್ನು ಚಾಣಾಕ್ಷತನದಿಂದ ಬೇದಿಸುವಲ್ಲಿ ಯಶಸ್ವಿಯಾದ ತನಿಖಾ ತಂಡದ ಪೊಲೀಸರಿಗೆ ಶ್ಲಾಘನೀಯ ಪತ್ರ ನೀಡಲಾಗಿದೆ ಎಂದು ವಿವರಿಸಿದರು.

Advertisement

ಎಎಸ್ಪಿ ಶಂಕರ ಮಾರಿಹಾಳ, ಸದರಿ ಪ್ರಕರಣ ತನಿಖಾಧಿಕಾರಿ ರಮೇಶ ಅವಜಿ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Realme C-51: ಫೋನ್‌ ಬಿಡುಗಡೆ- 1 ಗಂಟೆಯಲ್ಲಿ ಶೇ.100 ಚಾರ್ಜಿಂಗ್‌ ಖಾತರಿ

Advertisement

Udayavani is now on Telegram. Click here to join our channel and stay updated with the latest news.

Next