Advertisement
ರಾಜಕೀಯ ಸಂದಿಗ್ಧತೆಯ ಕಾರಣಕ್ಕೆ ವಿಜಯಪುರ ಜಿಲ್ಲೆಗೆ ಒಂದೇ ಒಂದು ಮಂತ್ರಿ ಭಾಗ್ಯ ಕಲ್ಪಿಸದ ಯಡಿಯೂರಪ್ಪ ಅವರು, ಬಜೆಟ್‌ನಲ್ಲಿ ಬಸವನಾಡಿಗೆ ವಿಶೇಷ ಕೊಡುಗೆ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಯ ನೀರಾವರಿ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮದಂತಹ ಪ್ರಮುಖ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡದೇ ಕಡೆಗಣಿಸಿರುವುದು ಜಿಲ್ಲೆಯ ಜನರಲ್ಲಿ ಆಕ್ರೋಶ ಹೊರ ಹಾಕುವಂತೆ ಮಾಡಿದೆ.
Related Articles
Advertisement
ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಡಿಸಿದ್ದ ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ, ಕುರಿಗಾರರ ಅನುಕೂಲಕ್ಕೆ ಕುರಿ ರೋಗ ತಪಾಷಣಾ ಕೇಂದ್ರ ಸ್ಥಾಪನೆಯಾಗಿಲ್ಲ. ಕನಿಷ್ಟ ಹೊಸದಾಗಿ ಅಡಿಗಲ್ಲು ಹಾಕಿಸಿಕೊಂಡ ನಾಗರಬೆಟ್ಟ ಏತ ನೀರಾವರಿ ಯೋಜನೆಗೂ ಬಿಡಿಗಾಸು ನೀಡಿಲ್ಲ.
ಜಿಲ್ಲೆಯಲ್ಲಿ 15 ಸಾವಿರ ಹೆಕ್ಟೇರ್ ದ್ರಾಕ್ಷಿ ಬೆಳಗಾರರು ಪ್ರಕೃತಿ ವಿಕೋಪ ಸೇರಿ ಹಲವು ಕಾರಣಗಳಿಂದ ನಿರಂತರ ನಷ್ಟ ಅನುಭವಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮಾಡಿರುವ ಬಡ್ಡಿ ಸಹಿತ ಸಾಲಮನ್ನಾ ಮಾಡುವ ಭರವಸೆಯೂ ಕೈಗೂಡಿಲ್ಲ. ಕುಮಾರಸ್ವಾಮಿ ಅವರು ದ್ರಾಕ್ಷಿ-ದಾಳಿಂಬೆ ಬೆಳೆಗಾರರಿಗೆ ಘೋಷಿಸಿದ್ದ ಪ್ಯಾಕೇಜ್ ಭರವಸೆಗೂ ಕಾಸು ಕೊಡುವ ಮಾತನಾಡಿಲ್ಲ.
ಇನ್ನು ಪ್ರವಾಸಿಗರ ಸ್ವರ್ಗ ಎನಿಸಿರುವ ವಿಜಯಪುರ ಜಿಲ್ಲೆ ಪ್ರವಾಸೋದ್ಯಮ ಬಲವರ್ಧನೆಯಲ್ಲಿ ಸರ್ಕಾರದ ನಿರ್ಲಕ್ಷದ ಕಾರಣ ಹಿಂದುಳಿದ ಈ ಪ್ರದೇಶ ವಿಶ್ವದರ್ಜೆಯ ಪ್ರವಾಸಿ ತಾಣಗಳಿದ್ದರೂ ದೇಶ-ವಿದೇಶ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ವಿಶ್ವವಿಖ್ಯಾತ ಗೋಲಗುಮ್ಮಟ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದು ಸೇರಿದಂತೆ ನಮನೂರಾರು ಸ್ಮಾರಕಗಳಿರುವ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡದೇ ನಿರ್ಲಕ್ಷಿಸಿದ್ದಾರೆ ಎಂದು ಶಾಹಿ ನಾಡಿನ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಮತ್ತೂಂದೆಡೆ ರಾಜ್ಯದಲ್ಲೇ ಅತ್ಯ ಧಿಕ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುವ ಕಾರಣಕ್ಕೆ ದ್ರಾಕ್ಷಿ ನಾಡು ಎಂದು ಹಿರಿಮೆ ತಂದುಕೊಟ್ಟಿರುವ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಸಂರಕ್ಷಣೆಗೆ ಶೈತ್ಯಾಗಾರಗಳು, ವೈನ್ ಪಾರ್ಕ್ ನಿರ್ಮಾಣದಂಥ ಬೇಡಿಕೆಗಳು ಈಡೇರಿಲ್ಲ. ಪ್ರಸಕ್ತ ವರ್ಷದಿಂದ ದ್ರಾಕ್ಷಿ ಅಭಿವೃದ್ಧಿ ಮಂಡಳಿ ಸ್ಥಾಪನೆಯಂಥ ಬೇಡಿಕೆಗೆ ಚಕಾರ ತೆಗೆಯದೇ ದ್ರಾಕ್ಷಿ ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಪ್ರವಾಸೋದ್ಯಮ ಹಾಗೂ ರಫ್ತು ಗುಣಮಟ್ಟದ ತೋಟಗಾರಿಕೆ ಬೆಳೆ ಬೆಳೆಯುವ ಜಿಲ್ಲೆಯಲ್ಲಿ ದಶಕದ ಹಿಂದೆ ತಾವೇ ಮುಖ್ಯಮಂತ್ರಿಯಾಗಿದ್ದಾಗ ಅಡಿಗಲ್ಲು ಹಾಕಿದ ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ ನೀಡಿಕೆಗೆ ನಿರ್ಧಿಷ್ಟವಾಗಿ ಚಕಾರ ಎತ್ತಿಲ್ಲ. ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಬೇಡಿಕೆಗೆ ಸ್ಪಂದಿಸಿಲ್ಲ. ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಎನಿಸಿರುವ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸಬಲೀಕರಣಕ್ಕೆ ಏನನ್ನೂ ನೀಡಿಲ್ಲ.
ಹೀಗೆ ನೂರಾರು ಕನಸು ಕಟ್ಟಿಕೊಂಡಿದ್ದ ವಿಜಯಪುರ ಜಿಲ್ಲೆಗೆ ಒಂದೇ ಒಂದು ನಿರ್ಧಿಷ್ಟ ಯೋಜನೆಯನ್ನು ಘೋಷಿಸದ ಹಾಗೂ ಈ ಹಿಂದೆ ಘೋಷಿತವಾಗಿ ಅನುದಾನಕ್ಕೆ ಕಾಯುತ್ತಿರುವ ಯಾವ ಯೋಜನೆಗಳಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿಲ್ಲ. ಅಷ್ಟರ ಮಟ್ಟಿಗೆ ಕುಂತಿ ಮಕ್ಕಳಿಗೆ ಪಟ್ಟವಿಲ್ಲ ಎಂಬ ಮಾತಿನಂತೆ ವಿಜಯಪುರ ಜಿಲ್ಲೆಯ ಜನರಿಗೆ ಬಜೆಟ್‌ನಲ್ಲಿ ಏನೂ ಗಿಟ್ಟದಾಗಿದೆ.
ಜಿ.ಎಸ್.ಕಮತರ