Advertisement

Vijayapura; ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ತಪ್ಪಿದ ಭಾರಿ ಅನಾಹುತ

08:38 AM Jul 07, 2024 | keerthan |

ವಿಜಯಪುರ: ಕಳೆದ ವರ್ಷ ಬಾಯ್ಲರ್ ಸ್ಪೋಟಗೊಂಡು ಕಾರ್ಮಿಕನ ಜೀವ ಪಡೆದ ದುರಂತ ಘಟನೆ ಮಾಸುವ ಮುನ್ನವೇ ಜಿಲ್ಲೆಯ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬಾಯ್ಲರ್ ಸ್ಫೋಟಗೊಂಡಿದೆ. ಸುದೈವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

Advertisement

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ನಸುಕಿನಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. ಸ್ಫೋಟ ಸಂಭವಿಸುವ ಕೆಲವೇ ಸಮಯಕ್ಕೆ ಮುನ್ನ ಕರ್ತವ್ಯದಲ್ಲಿದ್ದ ಸುಮಾರು 15 ಕಾರ್ಮಿಕರು ಚಹಾ ಕುಡಿಯಲೆಂದು ಹೊರ ಹೋಗಿದ್ದರು. ಪರಿಣಾಮ ಘಟನೆಯಲ್ಲಿ ಯಾವುದೇ ಜೀವಹಾನಿ ಆಗಿಲ್ಲ.

2023 ಮಾರ್ಚ್ 4 ರಂದು ಇದೇ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಓರ್ವ ಕಾರ್ಮಿಕ ಮೃತಪಟ್ಟು, ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಈ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ಬಾಯ್ಲರ್ ಸ್ಫೋಟಗೊಂಡಿರುವುದು ಕಾರ್ಮಿಕರು ಹಾಗೂ ರೈತರನ್ನು ಆತಂಕಕ್ಕೆ ದೂಡಿದೆ.

ಕೆಲವೇ ತಿಂಗಳಲ್ಲಿ ಮುಂದಿನ‌ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ಕಾಗಿ ಯಂತ್ರೋಪಕರಣ ಪೂರ್ವ ಸಿದ್ಧತೆ ಕಾರ್ಯ ನಡೆದಿವೆ.

ಮೇಲಿಂದ ಮೇಲೆ ಬಾಯ್ಲರ್ ಸ್ಫೋಟಗೊಳ್ಳಲು ಕಳಪೆ ಗುಣಮಟ್ಟದ ಕಾಮಗಾರಿ ಪ್ರಮುಖ ಕಾರಣವೆಂದು ರೈತರು ದೂರುತ್ತಿದ್ದಾರೆ. ಅಲ್ಲದೇ ನುರಿತ ಕಂಪನಿಗಳು 55 ಕೋಟಿ ರೂ.ಗೆ ಕಾಮಗಾರಿ ಮಾಡಲು ಮುಂದೆ ಬಂದರೂ ಹಣ ಉಳಿಸುವ ನೆಪದಲ್ಲಿ ಅನನುಭವಿ ಕಂಪನಿಗೆ 50 ಕೋಟಿ ರೂ.ಗೆ  ಬಾಯ್ಲರ್ ನಿರ್ಮಾಣದ ಯೋಜನೆಯ ಜವಾಬ್ದಾರಿ ನೀಡಿದ್ದೆ ಸರಣಿ ದುರ್ಘಟನೆಗಳಿಗೆ ಕಾರಣವೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

2013-18 ರ ಅವಧಿಯಲ್ಲಿ ಕುಮಾರ ದೇಸಾಯಿ ಕಾರ್ಖಾನೆಯ ಅಧ್ಯಕ್ಷರಾಗಿದ್ದಾಗ ದೆಹಲಿ ಮೂಲದ ಇಸ್ಫಾಕ್ ಕಂಪನಿಗೆ 55 ಕೋಟಿ ರೂ. ಗೆ ಯೋಜನೆ ಮುಗಿಸುವ ಜವಾಬ್ದಾರಿ ನೀಡಲಾಗಿತ್ತು.

ಇದರ ಬೆನ್ನಲ್ಲೇ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿ ಬದಲಾವಣೆಯಾಗಿ ಶಶಿಕಾಂತ ಪಾಟೀಲ ನೇತೃತ್ವದ ತಂಡ ಆಡಳಿತದ ಚುಕ್ಕಾಣಿ ಹಿಡಿದಿತ್ತು. 2018-23 ರ ಅವಧಿಗೆ ಶಶಿಕಾಂತ ದೇಸಾಯಿ ಆಡಳಿತಕ್ಕೆ ಬರುತ್ತಲೇ ಹಣ ಉಳಿಸುವ ನೆಪದಲ್ಲಿ ಇಸ್ಫಾಕ್ ಕಂಪನಿಗೆ ನೀಡಿದ್ದ ಕಾಮಗಾರಿ ಗುತ್ತಿಗೆ ರದ್ದು ಮಾಡಿತ್ತು. ಅಲ್ಲದೆ 50 ಕೋಟಿ ರೂ.ಗೆ ಪುಣೆ ಮೂಲದ ಎಸ್.ಎಸ್. ಎಂಜಿನಿಯರಿಂಗ್ ಕಂಪನಿಗೆ ಬಾಯ್ಲರ್ ನಿರ್ಮಾಣದ ಹೊಣೆ ನೀಡಿತ್ತು.

ಬೃಹತ್ ಪ್ರಮಾಣದ ಬಾಯ್ಲರ್ ನಿರ್ಮಾಣದ ಅನುಭವಿ ಇಸ್ಫಾಕ್ ಕಂಪನಿಗೆ ಬದಲಾಗಿ ಸಣ್ಣ ಗಾತ್ರದ ಬಾಯ್ಲರ್ ನಿರ್ಮಾಣದ ಅನುಭವ ಮಾತ್ರ ಹೊಂದಿದ್ದ ಎಸ್.ಎಸ್. ಕಂಪನಿಗೆ ನೀಡಲಾಗಿತ್ತು. ಸದರಿ ಯೋಜನೆ ನಿರ್ಮಾಣದಲ್ಲಿ ಕಾಮಗಾರಿ ಕಳಪೆ ಆಗಿರುವುದೇ ಬಾಯ್ಲರ್ ಸ್ಫೋಟಗಳ ಸರಣಿ ದುರಂತಕ್ಕೆ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ.

ನಿತ್ಯವೂ 6000 ಟನ್ ಕಬ್ಬು ನುರಿಸುವ ಸಕ್ಕರೆ ಕಾರ್ಖಾನೆಯ ಸಾಮರ್ಥ್ಯವನ್ನು 13,000 ಟನ್ ಸಾಮರ್ಥ್ಯಕ್ಕೆ ಹೆಚ್ಚಿಸುವ ಸದಾಶಯ ಹೊಂದಲಾಗಿತ್ತು. ಹೆಚ್ಚು ಕಬ್ಬು ನುರಿಸುವ ಮೂಲಕ ಸುಧಾರಿತ ತಂತ್ರಜ್ಞಾನದ ಅಳವಡಿಕೆಯ ಸದರಿ ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನಕ್ಕಾಗಿ 278 ಕೋಟಿ ರೂ. ವ್ಯಯಿಸಲು ಯೋಜಿಸಿತ್ತು.

ಆದರೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪದೇ ಪದೇ ಬಾಯ್ಲರ್ ಸ್ಫೋಟಗೊಳ್ಳುವ ದುರ್ಘಟನೆ ಸರಣಿಗಳಿಂದ ಕಾರ್ಖಾನೆಯೂ ಅಸರ್ಥಿಕ ದುಸ್ಥಿತಿಗೆ ಸಿಲುಕುತ್ತಿದೆ. ಕಾರ್ಖಾನೆಯ ಸುಸ್ಥಿರ ಕ್ಷಮತೆಗೂ ಧಕ್ಕೆಯಾಗಿ ಭವಿಷ್ಯದಲ್ಲಿ ಕಾರ್ಖಾನೆ ಆರ್ಥಿಕ ನಷ್ಟದ ಜೊತೆಗೆ ರೈತರ ವಿಶ್ವಾರ್ಹತೆ ಕಳೆದುಕೊಳ್ಳುವ ಭೀತಿ ಸೃಷ್ಟಿಸಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಾರಣ ಕಾರ್ಖಾನೆ ಬಾಯ್ಲರ್ ಸ್ಫೋಟ ಪ್ರಕರಣದ ತನಿಖೆಯ ಜೊತೆಗೆ ಯೋಜನೆ ಕಳಪೆತನ ಹಾಗೂ ಅರ್ಥಿಕ ಭ್ರಷ್ಟಾಚಾರ ತನಿಖೆಗಾಗಿ ಸರ್ಕಾರದ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next