ಧಾರವಾಡ: ಕಬ್ಬಿನ ರಸ ಕಾಮಾಲೆ ರೋಗಕ್ಕೆ ರಾಮಬಾಣ. ಆದರೆ ವರ್ಷವಿಡೀ ಕಬ್ಬಿನ ಹಾಲು ಸಿಗುವುದು ಕಷ್ಟ. ಆದರೆ ಇದೀಗ ರೈತರೊಬ್ಬರು ತಮ್ಮ ಸಂಬಂಧಿಗೆ ಕಾಮಾಲೆ ರೋಗಕ್ಕೆ ಕಬ್ಬಿನ ಹಾಲು ಸಿಗದೇ ನಿಧನರಾಗಿದ್ದನ್ನೇ ಸವಾಲಾಗಿ ಸ್ವೀಕರಿಸಿ ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರಜ್ಞಾನ ಶೋಧಿಸಿ ಸೈ ಎನಿಸಿಕೊಂಡಿದ್ದಾರೆ.
Advertisement
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕೆರವಾಡ ಗ್ರಾಮದ ಆರ್.ಐ. ಪಾಟೀಲ ಎಂಬ ರೈತರು ವರ್ಷಪೂರ್ತಿ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿ, ಕಬ್ಬಿನ ಹಾಲಿಗೆ ಮತ್ತಷ್ಟು ಬೆಲೆ ಬರುವಂತೆ ಮಾಡಿದ್ದಾರೆ. ಕಳೆದ ಐದಾರು ವರ್ಷಗಳಿಂದ ಈ ನಿಟ್ಟಿನಲ್ಲಿ ಶೋಧನೆ ಮತ್ತು ಪ್ರಯೋಗ ನಡೆಸಿಕೊಂಡು ಬಂದಿದ್ದ ಅವರು, 2024ರಲ್ಲಿ ಕಬ್ಬಿನ ಹಾಲನ್ನು ಗಾಜಿನ ಬಾಟಲಿಯಲ್ಲಿ ಒಂದು ವರ್ಷ ಕೆಡದಂತೆ ಇರಿಸುವ ತಂತ್ರಜ್ಞಾನ ಕಂಡುಹಿಡಿದಿದ್ದಾರೆ.
Related Articles
Advertisement
ಏನು ಲಾಭ?:ಕಬ್ಬಿನ ಹಾಲು ಕೆಡದಂತೆ ಉಳಿಯಬೇಕಾದರೆ ಸಾವಯವ ಪದ್ಧತಿಯಲ್ಲಿ ಬೆಳೆದ ಕಬ್ಬು ಅತ್ಯಂತ ಅಗತ್ಯ. ಹೀಗಾಗಿ ಈ ಕಬ್ಬಿನ ಹಾಲು ಉತ್ಪಾದನಾ ಘಟಕಕ್ಕೆ ಇದೀಗ ವರ್ಷವಿಡಿ ಕಬ್ಬು ಪೂರೈಕೆ ಮಾಡಲು ಖಾನಾಪುರ ತಾಲೂಕಿನ ಸಾವಯವ ರೈತರು ಮುಂದೆ ಬಂದಿದ್ದಾರೆ. ಕಬ್ಬಿನ ರಸದಿಂದ ಕಾಮಾಲೆ ರೋಗ ಗುಣವಾಗುತ್ತದೆ. ಜೀರ್ಣಕ್ರಿಯೆಗೆ ಪ್ರೇರಕ ಶಕ್ತಿ ಒದಗಿಸುತ್ತದೆ. ತೂಕ ಇಳಿಸಲು ಸಹಕಾರಿ, ಎಲುಬು-ಕೀಲು-ದಂತ ಬಲಪಡಿಸುತ್ತದೆ. ತುರ್ತು ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ. ಆಯುರ್ವೇದ ಪದ್ಧತಿಯಲ್ಲಿ ಈಗಾಗಲೇ ಕಬ್ಬಿನ ಹಾಲು ಕಾಮಾಲೆ ರೋಗಕ್ಕೆ ದಿವ್ಯ ಔಷಧಿ ಎಂಬುದು ಸಾಬೀತಾಗಿರುವ ವಿಚಾರ. ಇದನ್ನು ಇನ್ನಷ್ಟು ಗಟ್ಟಿಗೊಳಿಸಿ ದೇಶಿ ಆಹಾರ ಮತ್ತು ದೇಶಿ ಔಷಧಿಯನ್ನಾಗಿ ಕಬ್ಬಿನ ಹಾಲು ಉತ್ಪಾದನೆಯಾಗಿ ರೈತರ ಕೈ ಹಿಡಿಯಬೇಕು ಎನ್ನುತ್ತಾರೆ ಪಾಟೀಲರು.
ಉತ್ಪನ್ನಕ್ಕೆ ಪೇಟೆಂಟ್: ಕಬ್ಬಿನ ಹಾಲು ವರ್ಷವಿಡೀ ಕೆಡದಂತೆ ಇಡುವ ತಂತ್ರಜ್ಞಾನ ಮತ್ತು ಉತ್ಪಾದನೆ ವಿಚಾರಕ್ಕೆ ಸಂಬಂಧಿಸಿ ಪಾಟೀಲ ದಂಪತಿಗೆ ಕಬ್ಬಿನ ಹಾಲಿನ ಹಕ್ಕುಸ್ವಾಮ್ಯ (ಪೇಟೆಂಟ್)ಲಭಿಸಿದೆ. 20 ವರ್ಷಗಳ ಕಾಲ ಇದರ ಮೇಲೆ ಯಾವುದೇ ಉತ್ಪಾದನೆ ಮಾಡಿದರೂ ಈ ದಂಪತಿಗೆ ಧನಸಹಾಯ ಪ್ರಾಪ್ತವಾಗಲಿದೆ. ಅಷ್ಟೇಯಲ್ಲ, ಸಾವಯವ ಬೆಲ್ಲ ಮತ್ತು ಪುಡಿಯನ್ನು ಕೂಡ ಇವರು ಉತ್ಪಾದನೆ ಮಾಡುತ್ತಿದ್ದು, ಪುಣೆ, ಮುಂಬೈನಲ್ಲಿ ಉತ್ತಮ ಮಾರುಕಟ್ಟೆ ಲಭಿಸಿದೆ.
ಸಾವಯವ ಕೃಷಿ ಜಾಗೃತಿ ಬೀಡಿ, ಖಾನಾಪುರ ಸುತ್ತಲಿನ ರೈತರಲ್ಲಿ ಸಾವಯವ ಕೃಷಿ ಜಾಗೃತಿ ಕಳೆದ ಎರಡು ದಶಕದಿಂದ ನಡೆಯುತ್ತಿದೆ. ಈಗಾಗಲೇ ಸಾವಯವ ಅಕ್ಕಿ, ಅರಿಷಿಣ, ಬೆಲ್ಲ ಸೇರಿದಂತೆ ಅನೇಕ ಆಹಾರ ಉತ್ಪನ್ನಗಳನ್ನು ಸುತ್ತಲಿನ ರೈತರು ಉತ್ಪಾದನೆ ಮಾಡುತ್ತಿದ್ದಾರೆ. ರಾಜ್ಯ-ಹೊರ ರಾಜ್ಯಕ್ಕೂ ಕಳಿಸುತ್ತಿದ್ದಾರೆ. ಇದೀಗ ಅತ್ಯಂತ ಕುಗ್ರಾಮವಾದ ಕೆರವಾಡದಲ್ಲಿಯೇ ತಾವು ಬೆಳೆದ ಕಬ್ಬಿಗೆ ಮೌಲ್ಯವರ್ಧನೆ ಮಾಡುವ ಮತ್ತೊಂದು ಹೊಸ ವಿಧಾನ ಶೋಧಿಸಿದ ಈ ರೈತರು ಇತರರಿಗೆ ಮಾದರಿಯಾಗಿ ನಿಂತಿದ್ದಾರೆ.
ಯುವ ಪೀಳಿಗೆ ಕೃಷಿಯಿಂದ ಲಾಭವಿಲ್ಲ, ಇದರಿಂದ ಉಪಯೋಗವಿಲ್ಲ ಎನ್ನುತ್ತ ಕಾಲಹರಣ ಮಾಡುತ್ತಿದ್ದಾರೆ. ಹೊಸ ವಿಚಾರಗಳನ್ನು ನಮ್ಮಷ್ಟಕ್ಕೆ ನಾವೇ ಶೋಧಿಸಿಕೊಂಡು ಕೆಲಸ ಮಾಡುತ್ತ ಹೋದರೆ ಖಂಡಿತವಾಗಿಯೂ ಕೃಷಿ ನಮ್ಮನ್ನು ಉತ್ತುಂಗಕ್ಕೆ ಒಯ್ಯುತ್ತದೆ.●ಆರ್.ಐ. ಪಾಟೀಲ
ಪ್ರಗತಿಪರ ರೈತೋದ್ಯಮಿ, ಕೆರವಾಡ *ಬಸವರಾಜ್ ಹೊಂಗಲ್