ಬ್ರಹ್ಮಾವರ: ಇಲ್ಲಿನ ಸಕ್ಕರೆ ಕಾರ್ಖಾನೆಯ 110 ಎಕ್ರೆಯಲ್ಲಿ ಕರಾವಳಿಯ 3 ಜಿಲ್ಲೆಗಳ ರೈತರಿಗೆ ಅನು ಕೂಲವಾಗಲು ಸಕ್ಕರೆ ಜತೆಗೆ ಕೃಷಿ ಉತ್ಪನ್ನ ಮೌಲ್ಯವರ್ಧನೆ ಉದ್ದಿಮೆಗಳನ್ನು ಸ್ಥಾಪಿಸಬೇಕು ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.
ಬುಧವಾರ ಖಾಸಗಿ ಹೊಟೇಲ್‌ನಲ್ಲಿ ಜರಗಿದ ಕಾರ್ಖಾ ನೆಯ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಿಂದ ಮೇಲಿನ ಆಗ್ರಹ ಕೇಳಿಬಂದಿತು.
ಸಕ್ಕರೆ ಜತೆಗೆ ಎಥೆನಾಲ್, ಮೊಲಾಸಸ್, ಬೆಲ್ಲ ಸಹಿತ ವಿಭಿನ್ನ ಉತ್ಪನ್ನಗಳ ತಯಾರಿಕೆಗೆ ವಿಪುಲ ಅವಕಾಶವಿದ್ದು, ಮೌಲ್ಯವರ್ಧನೆ ಘಟಕಗಳಿಂದ ರೈತರ ಆದಾಯವೂ ಹೆಚ್ಚಿ ಉದ್ಯೋಗವೂ ಸೃಷ್ಟಿಯಾಗುತ್ತದೆ. ಕೃಷಿ ಹೊರತುಪಡಿಸಿದ ಉದ್ದೇಶಕ್ಕೆ ಅವಕಾಶ ನೀಡದೆ, ಕಾರ್ಖಾನೆ ಸ್ಥಳ ರೈತರ ಆಸ್ತಿಯಾ ಗಿಯೇ ಉಳಿಯಬೇಕು ಎಂದು ಮನವಿ ಮಾಡಿದರು.
ವಿಶೇಷಾಧಿಕಾರಿ, ಡಿಸಿ ಡಾ| ವಿದ್ಯಾ ಕುಮಾರಿ ಅಧ್ಯಕ್ಷತೆ ವಹಿಸಿ, ಕಾರ್ಖಾನೆ ಸ್ಥಳ ಸದ್ಬಳಕೆ ಕುರಿತು ವಿಸ್ತೃತ ಮಾಹಿತಿ ಪಡೆಯಲಾಗುವುದು. ಅವ್ಯವಹಾರ ಕುರಿತು ಪೊಲೀಸ್ ತನಿಖೆ ನಡೆದು ವರದಿ ಸಲ್ಲಿಕೆಯಾಗಿದೆ, ತಾಂತ್ರಿಕ ಸಮಿತಿ ವರದಿ ನೀಡಿದೆ. ತಪ್ಪುಗಳ ಬಗ್ಗೆ ಪುನರ್ ಪರಿಶೀಲಿಸಿ ಸ್ಪಷ್ಟೀಕರಣ ಪಡೆಯಲಾಗುವುದು. ಮರು ಆಡಿಟ್ ಸಹಿತ ರೈತರ ಬೇಡಿಕೆ ಹಾಗೂ ಸಭೆಯ ಚರ್ಚೆಯನ್ನು ದಾಖಲಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಡಿಸಿ ಹೇಳಿದರು.
ಪ್ರಮುಖರಾದ ಪ್ರಕಾಶ್ಚಂದ್ರ ಶೆಟ್ಟಿ, ಸತೀಶ್ ಕಿಣಿ, ಕಿಶನ್ ಹೆಗ್ಡೆ, ಯಡ್ತಾಡಿ ಸತೀಶ್ ಕುಮಾರ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಜಯಶೀಲ ಶೆಟ್ಟಿ, ಜಯಕರ ಶೆಟ್ಟಿ, ಉದಯ ಕುಮಾರ್, ವಿಕಾಸ್ ಹೆಗ್ಡೆ, ಶಶಿಧರ ಶೆಟ್ಟಿ ಮೊದಲಾದವರು ಮಾತನಾಡಿದರು.
ಸಹಕಾರ ಸಂಘಗಳ ವ್ಯವಸ್ಥಾಪಕ ನಿರ್ದೇಶಕಿ ಲಾವಣ್ಯಾ ಸ್ವಾಗತಿಸಿ, ಕಾರ್ಖಾನೆಯ ಗೋಪಾಲಕೃಷ್ಣ ವರದಿ ವಾಚಿಸಿದರು.