Advertisement

ಬಡತನ ನುಂಗಿ ಸಮಾಜ ಶ್ರೀಮಂತಗೊಳಿಸಿದರು ಹಳಕಟ್ಟಿ

04:06 PM Jul 03, 2019 | Team Udayavani |

ವಿಜಯಪುರ: ವಚನ ಪಿತಾಮಹ ಡಾ| ಫ‌.ಗು. ಹಳಕಟ್ಟಿ ಅವರು ತಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದ್ದ ಬಡತನ ನುಂಗಿಕೊಂಡು ನಮ್ಮೆಲ್ಲರನ್ನು ಬುದ್ಧಿ, ಭಾವ, ಕ್ರಿಯೆಗಳಿಂದ ಸಂಪತ್‌ ಭರಿತರನ್ನಾಗಿ ಮಾಡಿದ್ದಾರೆ ಎಂದು ಸಂಶೋಧಕ ಹಾಗೂ ವಚನ ಪಿತಾಮಹ ಡಾ| ಫ‌.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ| ಎಂ.ಎಸ್‌. ಮದಭಾವಿ ಅಭಿಪ್ರಾಯಪಟ್ಟರು.

Advertisement

ಮಂಗಳವಾರ ಬಿಎಲ್ಡಿಇ ಸಂಸ್ಥೆಯಿಂದ ಡಾ| ಫ‌.ಗು. ಹಳಕಟ್ಟಿ ಸ್ಮಾರಕ ಭವನದಲ್ಲಿ ಡಾ| ಫ.ಗು. ಹಳಕಟ್ಟಿ ಜನ್ಮೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಂಶೋಧನೆ, ಸಾಹಿತ್ಯ, ಸಾಮಾಜಿಕ, ಆರ್ಥಿಕ ಮತ್ತು ಅಧ್ಯಾತ್ಮಿಕ ಕ್ಷೇತ್ರಗಳಲ್ಲಿ ನಮ್ಮ ಜಿಲ್ಲೆಗೆ ಅಗ್ರಹ ಸ್ಥಾನ ಒದಗಿಸಿಕೊಟ್ಟ ಶ್ರೇಷ್ಠ ದಾರ್ಶನಿಕ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮರಾಠಿ ಮಯವಾಗಿದ್ದ ಈ ಭಾಗದಲ್ಲಿ ವಿಜಯಪುರದಲ್ಲಿ ಕನ್ನಡ ಶಾಲೆ ಸ್ಥಾಪಿಸಿ, ಅದರ ಕಂಪು ಬೀರಿದರು. ಕನ್ನಡ ಪತ್ರಿಕೆಗಳ ಮೂಲಕ ಜನರಲ್ಲಿ ಕನ್ನಡದ ಜಾಗೃತಿ, ಕನ್ನಡ ಭಾಷಾ ಪ್ರೇಮ ಮೆರೆದು ಕನ್ನಡ ಕಟ್ಟುವಲ್ಲಿ ಶ್ರಮಿಸಿದ ಮಹಾನ್‌ ಚೇತನ ಎಂದರು.

ಡಾ| ಫ.ಗು. ಹಳಕಟ್ಟಿ, ಹರ್ಡೇಕರ ಮಂಜಪ್ಪ ಮತ್ತು ಬಂಥನಾಳ ಮಹಾಶಿವಯೋಗಿಗಳು ಜಿಲ್ಲೆಯನ್ನು ಸಾಂಸ್ಕೃತಿಕ ಸಿರಿಯನ್ನಾಗಿಸಿದ ಅದ್ವೀತಿಯ ವ್ಯಕ್ತಿಗಳಾಗಿದ್ದಾರೆ. ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ತನು, ಮನ, ಧನದಿಂದ ದುಡಿದು ಜಿಲ್ಲೆಯನ್ನು ಸಮೃದ್ಧಿಯನ್ನಾಗಿ ಮಾಡಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.

ಖ್ಯಾತ ಸಂಶೋಧಕ ಕೃಷ್ಣ ಕೊಲಾØರ ಕುಲಕರ್ಣಿ, ಬಿಎಲ್ಡಿಇ ಸಂಸ್ಥೆ ಆಡಳಿತಾಧಿಕಾರಿ ಬಿ.ಆರ್‌. ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಳಕಟ್ಟಿ ಅವರ ಮರಿ ಮೊಮ್ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಬಿಎಲ್ಡಿಇ ಸಂಸ್ಥೆಯಿಂದ ಧನ ಸಹಾಯದ ಚೆಕ್‌ ವಿತರಿಸಲಾಯಿತು.

Advertisement

ಡಾ| ಮಹಾಂತೇಶ ಬಿರಾದಾರ, ವಿ.ಸಿ. ನಾಗಠಾಣ, ಮ.ಗು. ಯಾದವಾಡ, ಜಂಬುನಾಥ ಕಂಚ್ಯಾಣಿ, ಎ.ಎಸ್‌. ಬಿರಾದಾರ (ಕನ್ನಾಳ), ಬಿಎಲ್ಡಿಇ ಸಂಸ್ಥೆ ಸಿಬ್ಬಂದಿ ಹಾಗೂ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಮುಖ್ಯಾಧ್ಯಾಪಕರು, ಶಿಕ್ಷಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಡಾ| ಉಷಾದೇವಿ ಪ್ರಾರ್ಥಿಸಿದರು. ಎ.ಬಿ. ಬೂದಿಹಾಳ ಸ್ವಾಗತಿಸಿದರು. ಡಾ| ವಿ.ಡಿ. ಐಹೊಳ್ಳಿ ನಿರೂಪಿಸಿದರು. ಸುವರ್ಣಾ ಹುರಕಡ್ಲಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next