ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ರಾಜಕೀಯ ಪ್ರತಿಷ್ಠೆಯಾಗಿರುವ ಸಹಕಾರಿ ವಲಯದ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳ ಚುನಾವಣೆಗಾಗಿ ಭಾನುವಾರ ಮತದಾನ ನಡೆದಿದೆ. ಹಾಲಿ-ಮಾಜಿ ಶಾಸಕರ ಮಧ್ಯೆ ತೀವ್ರ ಪೈಪೋಟಿ ನಡೆದಿದೆ.
ವಿಜಯಪುರ ಜಿಲ್ಲೆಯ ಅದರಲ್ಲೂ ಅಖಂಡ ಇಂಡಿ ತಾಲೂಕಿನ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ರಾಜಕೀಯ ಪ್ರತಿಷ್ಠೆಯಿಂದಲೇ ಅರ್ಧ ಶತಮಾನದಿಂದ ಚರ್ಚೆಯಲ್ಲಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಯಶವಂತ್ರಾಯಗೌಡ ಪಾಟೀಲ ಇಂಡಿ ಶಾಸಕರಾಗಿ ಆಯ್ಕೆಯಾಗಿ, ಜನತೆಗೆ ಕೊಟ್ಟ ಮಾತಿನಂತೆ ಶಾಸಕರಾಗುತ್ತಲೇ ಕಾರ್ಖಾನೆ ಆರಂಭಿಸಿದ್ದಾರೆ.
ಇಂಥಹ ರಾಜಕೀಯ ಪ್ರತಿಷ್ಠೆಯ ಸಹಕಾರಿ ಕಾರ್ಖಾನೆಗೆ ಹಾಲಿ ಅಧ್ಯಕ್ಷರಾಗಿರುವ ಇಂಡಿ ಶಾಸಕ ಯಶವಂತ್ರಾಯಗೌಡ ಹಾಗೂ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಬರುವ ಐದು ವರ್ಷಗಗಳ ಅವಧಿಗಾಗಿ 13 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, 5 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.
ಉಳಿದ 8 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಹಾಲಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಸೇರಿದಂತೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಭಾನುವಾರ ಮರಗೂರು ಬಳಿ ಇರುವ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಶ್ರೀಸಿದ್ಧೇಶ್ವರ ಗೋದಾಮಿನಲ್ಲಿ ಮತದಾನ ನಡೆಯತ್ತಿದೆ.